ಇಸ್ಲಾಮಾಬಾದ್: ಪಾಕ್‌ನ ದಕ್ಷಿಣಭಾಗದ ನಗರ ಕರಾಚಿಯ ಬಂದರಿನಲ್ಲಿ ಕಂಟೇನರ್‌ನಿಂದ ಅಪರಿಚಿತ ವಿಷಕಾರಿ ಅನಿಲ ಸೋರಿಕೆಯಾಗಿ ಐದು ಜನರು ಸಾವನ್ನಪ್ಪಿದ್ದರೆ, 70 ಮಂದಿ ನಿತ್ರಾಣರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರಾಚಿ ಬಂದರಿನ ಕೆಮರಿ ಪ್ರದೇಶಕ್ಕೆ ಹಡಗಿನಲ್ಲಿ ಬಂದ ರಾಸಾಯನಿಕ ಕಂಟೇನರ್‌ನ ಕಾರ್ಮಿಕರು ಇಳಿಸುವಾಗ ಅನಿಲ ಸೋರಿಕೆಯಾಗಿದೆ ಎಂದು ದಕ್ಷಿಣ ಕರಾಚಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಶಾರ್ಜೀಲ್ ಖರಾಲ್ ತಿಳಿಸಿದ್ದಾರೆ.
ಗ್ಯಾಸ್ ಮಾಸ್ಕ್ ಧರಿಸಿದ ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಿ ಮೃತದೇಹ ಮತ್ತು ನಿತ್ರಾಣಗೊಂಡವರನ್ನ ನಗರದ ಅಬ್ಬಾಸಿ ಶಹೀದ್ ಆಸ್ಪತ್ರೆ ಮತ್ತು ಜಿನ್ನಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ ಎಂದು ಖಾಸಗಿ ರಕ್ಷಣಾ ಪಡೆ ಮುಖ್ಯಸ್ಥ ಫೈಸಲ್ ಎಧಿ ತಿಳಿಸಿದ್ದಾರೆ. ನಿತ್ರಾಣಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಗ್ಯಾಸ್ ಸೋರಿಕೆ ಆದ ನಂತರ ನೂರಾರು ಮಂದಿ ಸ್ಥಳದಿಂದ ಓಡಿ ಹೋಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅನಿಲ ಸೋರಿಕೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ತಂಡ ರಚಿಸಲಾಗಿದೆ ಎಂದು ಪಾಕಿಸ್ತಾನದ ಬಂದರು ವ್ಯವಹಾರಗಳ ಸಚಿವ ಅಲಿ ಜೈದಿ ಹೇಳಿದ್ದಾರೆ.