ಜಕಾರ್ತಾ: ಇಂಡೋನೇಷ್ಯಾದಲ್ಲಿ ನಿನ್ನೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ 45ಕ್ಕೆ ಏರಿಕೆಯಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಇಂಡೋನೇಷ್ಯಾದ ಸುಲವೇಸಿ ಪ್ರಾಂತ್ಯದಲ್ಲಿ ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆಯ ಭೂಕಂಪವಾಗಿತ್ತು. ರಸ್ತೆಗಳು, ಮನೆಗಳು, ಬಹುಮಹಡಿ ಕಟ್ಟಡಗಳು, ಆಸ್ಪತ್ರೆಗಳು, ವಿದ್ಯುತ್ ಕಂಬಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. 10 ಸಾವಿರಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಇದನ್ನೂ ಓದಿ: ಮಂಜು ತಂದ ಗಂಡಾಂತರ: ಗಾಜಿಯಾಬಾದ್ನಲ್ಲಿ 30 ಕ್ಕೂ ಹೆಚ್ಚು ವಾಹನಗಳ ಸರಣಿ ಅಪಘಾತ
ಅವಶೇಷಗಳಡಿ ಇನ್ನೂ ಹಲವರು ಸಿಲುಕಿಕೊಂಡಿದ್ದು, ವಿಪತ್ತು ನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿವೆ. ಆದರೆ ರಸ್ತೆಗಳಿಗೆ ಹಾನಿಯಾಗಿ ಸಂಪರ್ಕ ಕಡಿತವಾಗಿರುವುದು ರಕ್ಷಣಾ ಕಾರ್ಯಕ್ಕೆ ಅಡೆತಡೆ ತಂದೊಡ್ಡಿದೆ. ಸಂತ್ರಸ್ತರಿಗಾಗಿ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಕಾರ್ಗೋ ವಿಮಾನಗಳ ಮೂಲಕ ಅವರಿಗೆ ಆಹಾರ, ಹೊದಿಕೆಗಳನ್ನು ಪೂರೈಕೆ ಮಾಡಲಾಗುತ್ತಿದೆ. 200ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂಡೋನೇಷ್ಯಾವು 'ಪೆಸಿಫಿಕ್ ರಿಂಗ್ ಆಫ್ ಫೈರ್' ಎಂಬ ದುರ್ಬಲ ವಲಯದಲ್ಲಿ ಇರುವುದರಿಂದ ಆಗಾಗ್ಗೆ ಭೂಕಂಪಗಳಿಗೆ ಒಳಪಡುತ್ತಿರುತ್ತದೆ.