ಬೀಜಿಂಗ್ (ಚೀನಾ): ವಾರದ ಹಿಂದೆ ಸಂಭವಿಸಿದ್ದ ಗಣಿ ಸ್ಫೋಟದಲ್ಲಿ 22 ಜನರ ಪೈಕಿ 12 ಮಂದಿ ಜೀವಂತವಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಉಳಿದ 10 ಜನರು ಬದುಕಿರುವ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬದುಕುಳಿದಿರುವ 12 ಮಂದಿ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಶುದ್ಧಗಾಳಿಯ ಕೊರತೆಯಿಂದ ಉಳಿದವರ ಸ್ಥಿತಿ ಹದಗೆಡುತ್ತಿದೆ ಎನ್ನಲಾಗ್ತಿದೆ.
ಕಾರ್ಮಿಕರು ಸಿಲುಕಿರುವ ಕೋಣೆಗಳಿಂದ ಅಪಾಯಕಾರಿ ಹೊಗೆಯನ್ನು ಹೊರ ಹಾಕಲು 300 ಕ್ಕೂ ಹೆಚ್ಚು ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಸಾಧ್ಯವಾದಷ್ಟು ಎಲ್ಲರನ್ನೂ ಜೀವಂತವಾಗಿ ಕರೆತರಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 10 ರಂದು ಈ ದುರಂತ ಸಂಭವಿಸಿತ್ತು. ಆದರೆ, ಒಂದು ದಿನ ಕಳೆದರೂ ಕಾರ್ಯಾಚರಣೆ ಕೈಗೊಳ್ಳಲು ಹಿಂದೇಟು ಹಾಕಿದ ಕಾರಣ ಅಲ್ಲಿನ ವ್ಯವಸ್ಥಾಪಕರನ್ನು ವಶಕ್ಕೆ ಪಡೆಯಲಾಗಿದೆ.
ಕಲ್ಲಿದ್ದಲಿಗೆ ಭಾರಿ ಬೇಡಿಕೆ ಇರುವುದರಿಂದ ಚೀನಾ ಹೆಚ್ಚಿನ ಕಲ್ಲಿದ್ದಲು ತೆಗಯಲು ಮುಂದಾಗಿದೆ. ಆದರೆ, ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಈ ರೀತಿಯ ಅವಘಡಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ.
ಕಳೆದ ವರ್ಷ ಸಂಭವಿಸಿದ ಅವಘಡವೊಂದರಲ್ಲಿ ಒಂದೇ ಬಾರಿ 39 ಗಣಿ ಕಾರ್ಮಿಕರು ಮೃತಪಟ್ಟಿದ್ದರು. ಆದರೂ ಅಲ್ಲಿನ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ.