ವಾಷಿಂಗ್ಟನ್/ನವದೆಹಲಿ: ಭಾರತ ಒಂದುವೇಳೆ ಅಮೆರಿಕಕ್ಕೆ ಮಲೇರಿಯಾ ನಿರೋಧಕ ಔಷಧವಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ತುರ್ತಾಗಿ ಕಳುಹಿಸಿ ಕೊಡದೇ ಇದ್ದರೆ 'ಪ್ರತೀಕಾರ' ತೀರಿಸಿಕೊಳ್ಳುವ ಬಗ್ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ದೊಡ್ಡಣ್ಣನ ನಾಡಿನಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಈಗಾಗಲೇ 10 ಸಾವಿರ ಜನರು ಅಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಭಾರತ ಸೇರಿ ವಿಶ್ವಾದ್ಯಂತ ಮಲೇರಿಯಾ ನಿರೋಧಕವಾಗಿ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾಗೆ ರಾಮಬಾಣ ಎಂದು ಅಮೆರಿಕ ಪರಿಗಣಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೆ ಮತ್ತೆ ಕರೆ ಮಾಡುತ್ತಿರುವ ಟ್ರಂಪ್ ಈ ಡ್ರಗ್ಸ್ ಅನ್ನು ತುರ್ತಾಗಿ ಕಳುಹಿಸಕೊಡಬೇಕು ಎಂದು ಒತ್ತಡ ಹಾಕುತ್ತಿದ್ದಾರೆ.
ಟ್ರಂಪ್ ಹೇಳಿದ್ದೇನು?
ನಾನು ಮೋದಿ ಜೊತೆಗೆ ಈ ಕುರಿತಾಗಿ ಈಗಾಗಲೇ ಮಾತನಾಡಿದ್ದೇನೆ. ನಮಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿ ಒದಗಿಸಿದರೆ ಭಾರತದ ನಿರ್ಧಾರವನ್ನು ಮೆಚ್ಚುತ್ತೇವೆ. ಒಂದೊಮ್ಮೆ ನಿರಾಕರಿಸಿದರೆ ತೊಂದರೆ ಏನಿಲ್ಲ. ಆದರೆ ಸಹಜವಾಗಿ ಪ್ರತೀಕಾರವೂ ಇರಬಹುದು ಎಂದು ಎಚ್ಚರಿಕೆಯ ಮಾತನಾಡಿದ್ದಾರೆ.
ಭಾರತ ಹೇಳುವುದೇನು?
ಈ ಔಷಧಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಹಕಾರಿಯಾಗಬಲ್ಲದು ಎಂಬ ಉದ್ದೇಶದಿಂದ ಮಾರ್ಚ್ 25ರಂದು ಭಾರತ ಇದ್ರ ರಫ್ತು ನಿಷೇಧಿಸಿದೆ. ಹೈಡ್ರೋಕ್ಲೊರೋಕ್ವಿನ್ ರಫ್ತು ವಿಚಾರವನ್ನು ಪುನರ್ ಪರಿಶೀಲಿಸುತ್ತೇವೆ ಎಂದಷ್ಟೇ ಸದ್ಯ ಭಾರತ ಹೇಳುತ್ತಿದೆ.