ವಾಷಿಂಗ್ಟನ್: ಮುಂಬರುವ ಚಳಿಗಾಲದ ಅವಧಿಯಲ್ಲಿ ಮತ್ತು ರಜಾದಿನಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವು ದೇಶದಲ್ಲಿ ಮಾರಕ ಹಂತಕ್ಕೆ ತಲುಪಲಿದ್ದು, ಅಮೆರಿಕ ಇದಕ್ಕೆ ಸಿದ್ಧತೆ ನಡೆಸಿಲ್ಲ ಎಂದು ಯುಎಸ್ ಆರೋಗ್ಯ ತಜ್ಞರು ಭಾರಿ ಕಳವಳ ವ್ಯಕ್ತಪಡಿಸಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿಯಂತೆ ಅಮೆರಿಕದಲ್ಲಿ ಮಂಗಳವಾರ ಬೆಳಗ್ಗೆ ವೇಳೆಗೆ ಒಟ್ಟಾರೆ ಯುಎಸ್ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 10,051,722 ರಷ್ಟು ಹೆಚ್ಚಾಗಿದೆ. ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 238,201 ಕ್ಕೆ ಏರಿದೆ. ಈ ಎರಡು ಅಂಕಿ-ಸಂಖ್ಯೆಗಳು ಅಮೆರಿಕವನ್ನು ಪ್ರಸ್ತುತ ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾದಿಂದ ಹಾನಿಗೊಳಗಾದ ದೇಶವನ್ನಾಗಿ ಮಾಡಿದೆ.
ಲಾಕ್ಡೌನ್ನಿಂದಾಗಿ ದೀರ್ಘ ಕಾಲದ ವರೆಗೆ ಮನೆಯೊಳಗೆ ಇದ್ದ ಅಮೆರಿಕನ್ನರು ಇದೀಗ ಕುಟುಂಬ ಕೂಟಗಳು, ಗೆಟ್ ಟು ಗೆದರ್ ಪಾರ್ಟಿಗಳನ್ನು ಮಾಡಲು ರಜಾದಿನಗಳನ್ನು ಎಂಜಾಯ್ ಮಾಡಲು ಮುಂದಾಗುತ್ತಿದ್ದಾರೆ. ಆದರೆ, ಇದನ್ನು ನಿಯಂತ್ರಿಸುವಂತ ಯಾವುದೇ ಕೋವಿಡ್ -19 ನಿರ್ಬಂಧಗಳನ್ನು ಜಾರಿಗೊಳಿಸುವ ಮುನ್ಸೂಚನೆಯೇ ಕಾಣುತ್ತಿಲ್ಲ ಎಂದು ದಿ ಗಾರ್ಡಿಯನ್ ಪ್ರಕಟಿಸಿದ ಲೇಖನವೊಂದು ತಿಳಿಸಿದೆ.
ದೇಶದಲ್ಲಿ ಸಾರ್ವಜನಿಕ ಆರೋಗ್ಯ ಕ್ರಮಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರೀತಿಯಲ್ಲೇ ಮಂದಗತಿಯಲ್ಲಿ ಮುಂದುವರಿದರೆ, ನವೆಂಬರ್ 26 ರಂದು ನಡೆಯುವ ಥ್ಯಾಂಕ್ಸ್ ಗಿವಿಂಗ್ ಇವೆಂಟ್ ವೇಳೆ ಹೊಸ ಪ್ರಕರಣಗಳ ಸಂಖ್ಯೆ 200,000 ತಲುಪಬಹುದು ಎಂದು ಅಂದಾಜಿಸಲಾಗಿದೆ.
ನಾವು ಇದೀಗ ಸಾಂಕ್ರಾಮಿಕ ರೋಗದ ಅತ್ಯಂತ ಕೆಟ್ಟ ಸ್ಥಿತಿಗೆ ತಲುಪುತಿದ್ದೇವೆ ಎಂದು ಬ್ರೌನ್ ವಿಶ್ವವಿದ್ಯಾಲಯದ ವೈದ್ಯ ಮೇಗನ್ ರಾನ್ನೆ ತಿಳಿಸಿದ್ದಾರೆ. ದೇಶದ ಭವಿಷ್ಯವು ಮುಂದಿನ ಎರಡು ತಿಂಗಳುಗಳಲ್ಲಿ ಕೊರೊನಾ ನಿಯಂತ್ರಿಸುವುದರ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಅವರು ಹೇಳಿದ್ದಾರೆ. ಯುಎಸ್ನಲ್ಲಿ ವ್ಯಾಪಾರ ವಹಿವಾಟುಗಳ ಮೇಲೆ ಕೊರೊನಾ ಕರಿನೆರಳು ಬಿದ್ದಿರುವುದರಿಂದ ಇದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು. ಇದು ಆರ್ಥಿಕ ದಿವಾಳಿತನದ ಮುನ್ಸೂಚನೆ ಎನ್ನಲಾಗಿದೆ.
ಇನ್ನು ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಕೋವಿಡ್ -19 ಪ್ರಕರಣಗಳ ದಾಖಲೆಯ ಗರಿಷ್ಠ ಸರಾಸರಿ ಸುಮಾರು 100,000 ಕ್ಕೆ ಏರಿಕೆಯಾಗಿದೆ ಎಂದು ವರದಿ ಮಾಡಿದೆ.