ವಾಷಿಂಗ್ಟನ್: ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿ ಅಸಾಧ್ಯವಾದುದನ್ನೂ ಸಾಧ್ಯವಾಗಿಸುತ್ತಿದೆ. ಇದಕ್ಕೆ ಸಾಕ್ಷಿ ಸ್ಟ್ರ್ಯಾಟೋಲಾಂಚ್ ಏರ್‌ಕ್ರಾಫ್ಟ್. ಇದು ವಿಶ್ವದ ಅತಿದೊಡ್ಡ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೊತೆಗೆ ಆಕಾಶದಿಂದಲೇ ಈ ವಿಮಾನದ ಮೂಲಕ ಉಪಗ್ರಹಗಳನ್ನೂ ಲಾಂಚ್ ಮಾಡುವ ವ್ಯವಸ್ಥೆ ಇದೆ.
ಸಾಮಾನ್ಯವಾಗಿ ಲಂಬಾಂತರ(Vertical launch) ಕೋನದಿಂದ ಉಪಗ್ರಹಗಳನ್ನು ಆಗಸಕ್ಕೆ ಉಡಾಯಿಸುವುದನ್ನು ವಿಶ್ವದೆಲ್ಲೆಡೆ ನೋಡಿದ್ದೇವೆ. ಆದ್ರೆ, ಈ ವಿಮಾನ ಪ್ರಯಾಣಿಕರ ಜೊತೆಗೆ ರಾಕೆಟ್‌ನ್ನು ಉಪಗ್ರಹದ ಜೊತೆಗೆ ಕೊಂಡೊಯ್ಯಲಿದೆ. ಸಾಮಾನ್ಯ ವಿಮಾನದಂತೆ ರನ್ ವೇ ಮೂಲಕ ಟೇಕ್ ಆಫ್ ಆಗಲಿರುವ ಈ ಬೃಹತ್ ವಿಮಾನ ಅಂತರಿಕ್ಷದಲ್ಲಿ ಉಪಗ್ರಹ ಉಡ್ಡಯನ ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ.
ವಿಶ್ವದ ಅತೀದೊಡ್ಡ ವಿಮಾನದಲ್ಲಿ ಆರು ಬೋಯಿಂಗ್ 747 ಎಂಜಿನ್‌ಗಳಿದ್ದು, 28 ಚಕ್ರಗಳು, 2 ಫ್ಯೂಸ್‌ಲೇಜ್‌ಗಳನ್ನು ಒಳಗೊಂಡಿದೆ. ಈ ವಿಮಾನ ಅದೆಷ್ಟು ದೊಡ್ಡದಿದೆ ಎಂದರೆ ಇದರ ರೆಕ್ಕೆಗಳ ವಿಂಗ್ ಸ್ಪಾನ್ ಫುಟ್ಬಾಲ್ ಕ್ರೀಡಾಂಗಣದಷ್ಟಿದೆ. ವಿಶ್ವದ ಅತೀ ದೊಡ್ಡ ಪ್ರಯಾಣಿಕ ವಿಮಾನ ಏರ್ ಬಸ್ ಎ380 ಯ ವಿಂಗ್ ಸ್ಪಾನ್ ಇರೋದು ಕೇವಲ 80 ಮೀಟರುಗಳ ಆಸುಪಾಸು ಅಷ್ಟೇ. ಆದರೆ, ಸ್ಟ್ರ್ಯಾಟೋಲಾಂಚ್ ಏರ್‌ಕ್ರಾಫ್ಟ್ ರೆಕ್ಕೆಗಳ ವಿಂಗ್ ಸ್ಪಾನ್ 117 ಮೀಟರ್ ಇದೆ. ಗಾತ್ರದಲ್ಲಿ ಇದು ಏರ್‌ಬಸ್ ಎ380 ಜೆಟ್‌ನ ಒಂದುವರೆ ಪಟ್ಟು ದೊಡ್ಡದಿದೆ.
ಈ ವಿಮಾನದ ಮೊದಲ ಪರೀಕ್ಷಾರ್ಥ ಉಡಾವಣೆ ಕ್ಯಾಲಿಫೋರ್ನಿಯಾದಲ್ಲಿ ಯಶಸ್ವಿಯಾಗಿ ನಡೆದಿದೆ. ಇಲ್ಲಿನ ಮೊಜಾವೇ ಮರುಭೂಮಿಯ ಮೇಲೆ ನಿನ್ನೆ ಕೆಲಕಾಲ ಹಾರಾಡಿದ ಸ್ಟ್ರ್ಯಾಟೋಲಾಂಚ್ ಏರ್‌ಕ್ರಾಫ್ಟ್ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು.
ಅಮೆರಿಕಾದ ಎಂಜಿನಿಯರಿಂಗ್ ಕಂಪನಿ ಸ್ಕೇಲ್ಡ್ ಕಾಂಪೋಸಿಟ್ಸ್ ಈ ವಿಮಾನವನ್ನು ತಯಾರು ಮಾಡಿದೆ. ಇನ್ನು ಇದರ ವೇಗ ಗಂಟೆಗೆ ಸರಾಸರಿ 304 ಕಿಮೀ ಇದೆ. ಪರೀಕ್ಷಾರ್ಥ ಹಾರಾಟದ ವೇಳೆ ಈ ವಿಮಾನ ಗರಿಷ್ಠ 17 ಸಾವಿರ ಅಡಿ ಎತ್ತರದಲ್ಲಿ ಹಾರಾಡಿದೆ. ಆಗಸಕ್ಕೆ ಪ್ರಯಾಣಿಕರು, ರಾಕೆಟ್‌ಗಳನ್ನು ಕೊಂಡೊಯ್ದು ಉಪಗ್ರಹಗಳನ್ನು ಕಕ್ಷೆಯಲ್ಲಿ ಕೂರಿಸುವ ಸೌಕರ್ಯ ಹೊಂದಿರುವ ಈ ವಿಮಾನ ವಿಶ್ವದ ಗಮನ ಸೆಳೆದಿದೆ.
ಈ ಬಗ್ಗೆ ಮಾತನಾಡಿದ ಸ್ಟ್ರಾಟೋಲಾಂಚ್ ಸಿಇಒ ಜೀನ್ ಫ್ಲಾಯಿಡ್, ವಿಮಾನದ ಹಾರಾಟ ಅದ್ಭುತವಾಗಿತ್ತು. ಭೂಮಿಯಿಂದ ಉಪಗ್ರಹಗಳನ್ನು ಲಂಬಾಂತರವಾಗಿ ಉಡ್ಡಯನ ಮಾಡುವುದಕ್ಕೆ ಪರ್ಯಾಯ ವ್ಯವಸ್ಥೆ ಕಂಡುಹಿಡಿದಿರುವುದು ಖುಷಿ ತಂದಿದೆ ಎಂದರು.