ವಿಲ್ಮಿಂಗ್ಟನ್: ಅಮೆರಿಕ ಉಪಾಧ್ಯಕ್ಷರಾಗಿ ಚುನಾಯಿತರಾದ ಬಳಿಕ ಮೊದಲ ಬಾರಿಗೆ ದೇಶದ ಜನರನ್ನು ಉದ್ದೇಶಿಸಿದ ಮಾತನಾಡಿರುವ ಕಮಲಾ ಹ್ಯಾರಿಸ್, "ನಾನು ಈ ಕಚೇರಿಗೆ ಆಯ್ಕೆಯಾದ ಮೊದಲ ಮಹಿಳೆಯಾಗಿದ್ದರೂ, ಕೊನೆಯವಳಾಗಿರುವುದಿಲ್ಲ, ಈ ಕಾರ್ಯಕ್ರಮ ನೋಡುತ್ತಿರುವ ಪ್ರತಿಯೊಬ್ಬ ಪುಟ್ಟ ಮಗುವೂ ಕೂಡ ಈ ದೇಶದಲ್ಲಿನ ಸಾಧ್ಯತೆಗಳ ಬಗ್ಗೆ ಎದುರು ನೋಡುತ್ತಿರುತ್ತಾಳೆ" ಎಂದು ಹೇಳಿದ್ದಾರೆ.
ಮತದಾರರಿಗೆ ಧನ್ಯವಾದ ತಿಳಿಸಿದ ಕಮಲಾ ಹ್ಯಾರಿಸ್ "ನೀವು ಸ್ಪಷ್ಟ ಸಂದೇಶವನ್ನು ನೀಡಿದ್ದೀರಿ, ನೀವು ಭರವಸೆ ಮತ್ತು ಏಕತೆ, ಸಭ್ಯತೆ, ವಿಜ್ಞಾನ ಮತ್ತು ಸತ್ಯವನ್ನು ಆರಿಸಿದ್ದೀರಿ. ನೀವು ಜೋ ಬೈಡನ್ ಅವರನ್ನು ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೀರಿ, ಅಮೆರಿಕಕ್ಕೆ ಹೊಸ ದಿನವನ್ನು ನೀಡಿದ್ದೀರಿ" ಎಂದು ಹೇಳಿದ್ದಾರೆ.
"ನನ್ನ ಈ ಸ್ಥಿತಿಗೆ ಕಾರಣರಾದ ನನ್ನ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಅವರಿಗೆ ಋಣಿಯಾಗಿದ್ದೇನೆ. ಆವರು ಅಮೆರಿಕಕ್ಕೆ ಬಂದಾಗ ಕೇವಲ 19 ವರ್ಷ ವಯಸ್ಸು. ಅವರು ಆ ದಿನ ಅಮೆರಿಕಕ್ಕೆ ಕಾಲಿಟ್ಟಾಗ ಇಂತಹ ಒಂದು ಕ್ಷಣ ಬರುತ್ತದೆ ಎಂದು ಊಹಿಸಿರಲೂ ಸಾಧ್ಯವಿಲ್ಲ. ಆದರೆ ಈ ರೀತಿಯ ಕ್ಷಣಕ್ಕೆ ಸಾಕ್ಷಿಯಾಗಿರುವ ಅಮೆರಿಕವನ್ನು ತುಂಬಾ ಅರಿತಿದ್ದರು" ಎಂದು ಹೇಳಿದ್ದಾರೆ.
"ನನ್ನ ತಾಯಿ ಮತ್ತು ಅವರ ತಲೆಮಾರಿನಲ್ಲಿದ್ದ ಕಪ್ಪು ಮಹಿಳೆಯರು, ಏಷ್ಯನ್, ಬಿಳಿ, ಲ್ಯಾಟಿನ್, ಸ್ಥಳೀಯ ಅಮೆರಿಕನ್ ಮಹಿಳೆಯರ ಬಗ್ಗೆ ಯೋಚಿಸುತ್ತಿದ್ದೆ. ಅವರು ನಮ್ಮ ರಾಷ್ಟ್ರದ ಇತಿಹಾಸದುದ್ದಕ್ಕೂ ಈ ಕ್ಷಣಕ್ಕಾಗಿ ದಾರಿ ಮಾಡಿಕೊಟ್ಟಿದ್ದಾರೆ" ಎಂದು ಕಮಲಾ ಹ್ಯಾರಿಸ್ ತಿಳಿಸಿದ್ದಾರೆ.