ನ್ಯೂಯಾರ್ಕ್: ಅಮೆರಿಕದ ದಕ್ಷಿಣ ಕರೊಲಿನಾದ ಮಹಿಳೆಯೊಬ್ಬಳು ತನ್ನ ಪತಿಯ ಐ ಡ್ರಾಪ್ಸ್ನಲ್ಲಿ ವಿಷ ಬೆರಸಿ, ಅದನ್ನು ಪ್ರತಿನಿತ್ಯ ಸ್ವಲ್ಪ ಸ್ವಲ್ಪ ಆತ ಕುಡಿಯುವ ನೀರಿನಲ್ಲಿ ಬೆರಸಿ ಕೊಲೆಗೈದಿದ್ದಾಳೆ.
ಲಾನಾ ಸ್ಯೂ ಕ್ಲೇಟನ್ (53) ಕೊಲೆಗಾತಿ. ಈ ಕೃತ್ಯಕ್ಕಾಗಿ ಅಮೆರಿಕ ನ್ಯಾಯಾಲಯವು ಆಕೆಗೆ 25 ವರ್ಷ ಸೆರೆವಾಸ ವಿಧಿಸಿದೆ.
ಆರೋಪಿಯು ತನ್ನ ಪತಿ ಸ್ಟೆವೆನ್ ಕ್ಲೇಟನ್ಗೆ ಐಡ್ರಾಪ್ಸ್ ಜೊತೆ ವಿಷ ಬೆರೆಸಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೇ ಮೂರು ದಿನದಿಂದ ಆಕೆ ನಿರಂತರವಾಗಿ ಔಷಧಿಗೆ ವಿಷ ಬೇರೆಸಿ ನೀಡುತ್ತಿದ್ದಳು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ನ್ಯಾಯಾಲಯದಲ್ಲಿ ಲಾನಾ ಕ್ಲೇಟನ್ ಪರ ವಾದ ಮಾಡಿರುವ ವಕೀಲರು, ಆಕೆ ತುಂಬಾ ಒಳ್ಳೆಯಾಕೆ. ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಬಾಲ್ಯದಲ್ಲಿದ್ದಾಗ ಅವರನ್ನು ನಿಂದಿಸಲಾಗುತ್ತಿತ್ತು ಮತ್ತು ಶೋಷಣೆಗೆ ಒಳಗಾಗಿದ್ದರು. ಅನಂತರ ಆಘಾತಕ್ಕೊಳಗಾಗಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು, ಹೀಗಾಗಿ ಈ ರೀತಿ ಮಾಡಿದ್ದಾರೆ ಎಂದು ಕೋರ್ಟ್ಗೆ ತಿಳಿಸಿದ್ದಾರೆ. ಲಾನಾ ಕ್ಲೇಟನ್ ಅವರು ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ವಕೀಲರು ತಿಳಿಸಿದ್ದು, ಆಕೆಯ ಮಾನಸಿಕ ಸ್ಥಿತಿ ಸರಿಯಾಗಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.