ಕಾಬೂಲ್, ಅಫ್ಘಾನಿಸ್ತಾನ: ಅಮೆರಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಅಫ್ಘಾನಿಸ್ತಾನದ ರಾಯಭಾರ ಕಚೇರಿಯಿಂದ ಹೊರಡಲು ಸಜ್ಜಾಗಿದ್ದು, ತಾಲಿಬಾನಿಗಳು ಅಕ್ಷರಶಃ ಕಾಬೂಲ್ನ ಬಾಗಿಲಲ್ಲಿದ್ದಾರೆ.
ಕಾಬೂಲ್ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಸಿಬ್ಬಂದಿ ತಮ್ಮ ರಾಷ್ಟ್ರಕ್ಕೆ ಸ್ಥಳಾಂತರಗೊಳ್ಳಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವೊಂದು ದಾಖಲೆಗಳನ್ನು ನಾಶಪಡಿಸುವ ಕಾರ್ಯವೂ ಮುಂದುವರೆದಿದೆ.
ಅಫ್ಘಾನಿಸ್ತಾನದಲ್ಲಿ ಒಟ್ಟು 34 ಪ್ರಾಂತೀಯ ರಾಜಧಾನಿಗಳಿದ್ದು, ಅರ್ಧದಷ್ಟು ರಾಜಧಾನಿಗಳು ಅಥವಾ ಅಫ್ಘಾನಿಸ್ತಾನದ ಮೂರನೇ ಎರಡು ಭಾಗವನ್ನು ತಾಲಿಬಾನಿಗಳು ವಶಕ್ಕೆ ಪಡೆದಿದ್ದಾರೆ. ಇನ್ನೆರಡು ವಾರಗಳಲ್ಲಿ ಎಲ್ಲ ವಿದೇಶಿ ಸೇನೆಗಳು ಅಫ್ಘಾನಿಸ್ತಾನವನ್ನು ತೊರೆಯಲಿವೆ.
ಈ ಬಗ್ಗೆ ಅಮೆರಿಕ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದು, ಪ್ರಮುಖ ಗಡಿಗಳು, ಹೆದ್ದಾರಿಗಳು, ಸಂವಹನ ಕಚೇರಿಗಳನ್ನು ತಾಲಿಬಾನಿಗಳು ವಶಕ್ಕೆ ತೆಗೆದುಕೊಳ್ಳುವ ಮೂಲಕ ಕಾಬೂಲ್ ಅನ್ನು ಪ್ರತ್ಯೇಕಗೊಳಿಸಲು ಮುಂದಾಗಿದ್ದಾರೆ ಎಂದಿದೆ.
ಅಫ್ಘಾನಿಸ್ತಾನ ತೊರೆಯುವ ಅಮೆರಿಕದ ಎಲ್ಲ ರಾಯಭಾರ ಕಚೇರಿ ನೌಕರರು ಮತ್ತು ಸಿಬ್ಬಂದಿಯ ರಕ್ಷಣೆಗಾಗಿ ಸುಮಾರು 3 ಸಾವಿರ ಮಂದಿ ಸೈನಿಕರನ್ನು ಹೆಚ್ಚುವರಿಯಾಗಿ ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ಪೆಂಟಗಾನ್ ಪ್ರೆಸ್ ಸೆಕ್ರೆಟರಿ ಜಾನ್ ಕಿರ್ಬಿ ತಿಳಿಸಿದ್ದಾರೆ.
ಇದನ್ನೂ ಓದಿ: ಆಗಸ್ಟ್ 14 ಇನ್ಮುಂದೆ 'ವಿಭಜನೆಯ ಭಯಾನಕತೆಯ ನೆನಪಿನ ದಿನ': ಪ್ರಧಾನಿ ಮೋದಿ