ವಾಷಿಂಗ್ಟನ್: ತಮ್ಮ ಬಂಧು ಬಳಗ ಭೇಟಿಯಾಗಲು ಅಥವಾ ಪ್ರವಾಸಕ್ಕಾಗಿ ಅಥವಾ ವ್ಯಾಪಾರ ಉದ್ದೇಶಕ್ಕಾಗಿ ಅಮೆರಿಕ ಪ್ರವೇಶಿಸಿರುವ ಭಾರತೀಯರು ತಮ್ಮ ವೀಸಾ ಅವಧಿ ಹೆಚ್ಚಿಸಲು ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂದು ಅಮೆರಿಕದ ಆಂತರಿಕ ರಕ್ಷಣಾ ಇಲಾಖೆ ತಿಳಿಸಿದೆ.
ಕೊರೊನಾ ವೈರಸ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಅಮೆರಿಕದ ಈ ಕ್ರಮದಿಂದ ಸಾಕಷ್ಟು ಭಾರತೀಯ ಪ್ರವಾಸಿಗರು ನಿಟ್ಟುಸಿರು ಬಿಡುವಂತಾಗಿದೆ.
ವೀಸಾ ಅವಧಿ ಹೆಚ್ಚಿಸಲು ಕೋರಿ ಬರುವ ಅರ್ಜಿಗಳನ್ನು ಅವುಗಳ ತುರ್ತು ಹಾಗೂ ಸಾಚಾತನ ಆಧರಿಸಿ ನಿರ್ಧರಿಸಲಾಗುವುದು. ವೀಸಾ ಅವಧಿ ಮೀರುತ್ತಿರುವ ಪ್ರವಾಸಿಗರು 'ಯುನೈಟೆಡ್ ಸ್ಟೇಟ್ಸ್ ಸಿಟಿಜನ್ಶಿಪ್ ಮತ್ತು ಇಮಿಗ್ರೇಶನ್ ಸರ್ವಿಸಸ್' ಕಚೇರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ತಮ್ಮ ದೇಶಕ್ಕೆ ತೆರಳಲು ಯಾವುದೇ ವಿಮಾನಯಾನ ಸೌಕರ್ಯ ಲಭ್ಯವಿಲ್ಲದ ಸ್ಥಿತಿಯಲ್ಲಿ ಅಂಥ ಅರ್ಜಿಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಲಾಗುವುದು ಎಂದು ಇಲಾಖೆ ಹೇಳಿದೆ.