ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದಿದ್ದು, ಆಗಸ್ಟ್ 31ರೊಳಗೆ ವಿದೇಶಿಗರ ಸ್ಥಳಾಂತರ ಪ್ರಕ್ರಿಯೆ ಮುಗಿಸುವಂತೆ ತಾಲಿಬಾನ್ ಉಗ್ರ ನಾಯಕರು ಅಮೆರಿಕ ಮತ್ತು ನ್ಯಾಟೋ ಪಡೆಗಳಿಗೆ ಗಡುವು ವಿಧಿಸಿದ್ದಾರೆ.
ಈ ಬೆಳವಣಿಗೆಗಳ ನಡುವೆ, ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಸೇನೆಯನ್ನು ವಾಪಸ್ ಕರೆಸಿಕೊಳ್ಳದೆ ಇನ್ನೂ ಕೆಲಕಾಲ ಅಮೆರಿಕ ಹಾಗೂ ಮಿತ್ರ ದೇಶಗಳು ಅಲ್ಲೇ ನೆಲಸಬೇಕು. ಪೂರ್ಣ ಪ್ರಮಾಣದಲ್ಲಿ ಸೇನೆಯನ್ನು ವಾಪಸ್ ಕರೆಸಿಕೊಳ್ಳಬಾರದು ಎಂಬ ಒತ್ತಾಯಗಳೂ ಬರುತ್ತಿವೆ. ವಿದೇಶಿಗರನ್ನು ಸ್ಥಳಾಂತರಗೊಳಿಸುವ ಕಾರ್ಯಾಚರಣೆ ಮುಗಿಯದ ಕಾರಣ ಸೇನೆ ಸ್ವಲ್ಪ ದಿನಗಳ ಮಟ್ಟಿಗೆ ಅಲ್ಲಿಯೇ ಇರಬೇಕು ಎಂಬ ಒತ್ತಡವಿದೆ.
ಇನ್ನೊಂದೆಡೆ, ಅಫ್ಘಾನ್‌ನಿಂದ ಯುಎಸ್ ಸೇನೆಯನ್ನು ಪೂರ್ಣ ಪ್ರಮಾಣದಲ್ಲಿ ವಾಪಸ್ ಕರೆಸಿಕೊಂಡರೆ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳೇ ತಿಳಿಸಿದ್ದಾರೆ. ಸೇನೆ ವಾಪಸ್ ಬಂದರೆ ಅಲ್ಲಿನ ಜನರಿಗೆ ನಾವು ಹೇಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ತಾಲಿಬಾನಿಗಳಿಗೆ ಸೆಡ್ಡು ಹೊಡೆದ ಚಿಕ್ಕ ಪ್ರಾಂತ್ಯ... ವಶಕ್ಕೆ ಬಂದ 50 ಉಗ್ರರ ಮಟಾಷ್
ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಿನ್ನೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಅಫ್ಘಾನ್ ಸೈನಿಕನನ್ನು ಹತ್ಯೆ ಮಾಡಲಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಅಮೆರಿಕ ಹಾಗೂ ಮಿತ್ರ ದೇಶಗಳು ಈಗಾಗಲೇ ಘೋಷಿಸಿರುವ ನಿಗದಿತ ಗಡುವಿನೊಳಗೆ ಅಫ್ಘಾನಿಸ್ತಾನವನ್ನು ತೊರೆಯಬೇಕು. ಇಲ್ಲದಿದ್ದರೆ ಮುಂದಾಗುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ತಾಲಿಬಾನಿಗಳು ಈಗಾಗಲೇ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇಂದು ಜಿ-7 ಸಭೆ
ಇಂದು ಬ್ರಿಟನ್, ಅಮೆರಿಕ, ಫ್ರಾನ್ಸ್, ಇಟಲಿ, ಕೆನಡಾ, ಜರ್ಮನಿ ಹಾಗೂ ಜಪಾನ್ ಒಳಗೊಂಡ ಜಿ-7 ಸಭೆ ನಡೆಸಲಿದ್ದು, ಅಫ್ಘಾನ್ ವಿಚಾರವಾಗಿ ಯಾವ ನಿರ್ಧಾರವನ್ನು ಕೈಗೊಳ್ಳಲಿವೆ ಎಂಬುದನ್ನು ಕಾದು ನೋಡಬೇಕಿದೆ.