ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿರುವ ಕಾಳ್ಗಿಚ್ಚು ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಎಬಿಸಿ ಟಿವಿಯ ವರದಿಯ ಪ್ರಕಾರ, ಲಾಸ್ಏಂಜಲೀಸ್ನ ಈಶಾನ್ಯಕ್ಕೆ 20 ಮೈಲಿ ದೂರದಲ್ಲಿರುವ ಅಜುಸಾ ತಪ್ಪಲಿನಲ್ಲಿ ಸಹ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರ ರಕ್ಷಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಮುಂದಾಗಿದ್ದಾರೆ. ಒಣ ಹವೆ ಮತ್ತು ಬೀಸುತ್ತಿರುವ ಗಾಳಿಯು ಬೆಂಕಿಯನ್ನು ದೂರದವರೆಗೂ ಹರಡುವಂತೆ ಮಾಡುತ್ತಿದೆ.
ಈಗಾಗಲೇ ಬೆಂಕಿ ಸುಮಾರು 600 ಎಕರೆ ಪ್ರದೇಶಕ್ಕೆ ವಿಸ್ತರಿಸಿದ್ದು, ಈ ಪ್ರದೇಶದಲ್ಲಿರುವವರನ್ನು ಸ್ಥಳಾಂತರಿಸುವಂತೆ ಪೊಲೀಸರು ತಿಳಿಸಿದ್ದಾರೆ ಎಂದು ಕೆಎಬಿಸಿ ವರದಿಯಲ್ಲಿ ತಿಳಿಸಿದೆ.
ಏಂಜಲೀಸ್ ರಾಷ್ಟ್ರೀಯ ಅರಣ್ಯದಲ್ಲಿ ಬುಧವಾರ ಬೆಂಕಿಯ ರಭಸಕ್ಕೆ ಭಾರಿ ಪ್ರಮಾಣದ ಕಾಳ್ಗಿಚ್ಚು ಉಂಟಾಗಿದ್ದು, ಮನೆಗಳನ್ನು ರಕ್ಷಿಸಲು ಸಿಬ್ಬಂದಿ ಪರದಾಡಿದರು. ಗುರುವಾರ ಬೆಳಗ್ಗೆ ಬೆಂಕಿಯು ಸುಮಾರು 16.5 ಚದರ ಮೈಲಿ ವ್ಯಾಪಿಸಿದ್ದು, ದಿನದ ಆರಂಭದಲ್ಲಿ ಲಘು ಗಾಳಿ ಮತ್ತು ಮೋಡ ಕವಿದ ವಾತಾವರಣ ನಿರ್ಮಾಣವಾದ ಹಿನ್ನೆಲೆ ಅಗ್ನಿಶಾಮಕ ದಳದವರು ಜ್ವಾಲೆಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲು ಸಹಕಾರಿಯಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಡೌನ್ಟೌನ್ ಲಾಸ್ ಏಂಜಲೀಸ್ ಉತ್ತರಕ್ಕೆ ಸುಮಾರು 60 ಮೈಲಿ ದೂರದಲ್ಲಿರುವ ಏಂಜಲೀಸ್ ರಾಷ್ಟ್ರೀಯ ಅರಣ್ಯದ ಲೇಕ್ ಹ್ಯೂಸ್ ಪ್ರದೇಶಕ್ಕೆ ಸುಮಾರು 100 ಮನೆಗಳನ್ನು ಸ್ಥಳಾಂತರಿಸಲಾಗಿದೆ.