ವಾಷಿಂಗ್ಟನ್: ಕೊರೊನಾ ವೈರಸ್ ಹುಟ್ಟಿದ್ದು ವುಹಾನ್ ಪ್ರಯೋಗಾಲಯದಲ್ಲೇ ಎಂದು ಆರೋಪಿಸಿದ ಬೆನ್ನಲ್ಲೇ, ವುಹಾನ್ ನಗರದಲ್ಲಿ ಏಕಾಏಕಿ ಹರಡಿದ ಕೊರೊನಾ ವೈರಸ್ ಪರಿಸ್ಥಿತಿಯನ್ನು ಚೀನಾ, ತಪ್ಪಾಗಿ ನಿರ್ವಹಿಸಿದೆ ಎಂದು ಶ್ವೇತಭವನ ಆರೋಪಿಸಿದೆ.
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ವರದಿಯಾದ ಮಾರಣಾಂತಿಕ ಕೊರೊನಾ ವೈರಸ್, ಇದುವರೆಗೆ 64,000 ಅಮೆರಿಕನ್ನರು ಸೇರಿದಂತೆ ಜಾಗತಿಕವಾಗಿ ಸುಮಾರು 2,40,000 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ. ವಿಶ್ವದಾದ್ಯಂತ 34 ಲಕ್ಷ ಜನರಿಗೆ ಸೋಂಕು ತಗುಲಿಸಿದೆ.
ಸದ್ಯ ಅಮೆರಿಕಾ ಸೇರಿದಂತೆ ವಿಶ್ವದ ಪ್ರಬಲ ರಾಷ್ಟ್ರಗಳಾದ, ಜರ್ಮನಿ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವಾರು ದೇಶಗಳು ಜಗತ್ತಿನಾದ್ಯಂತ ಕೊರೊನಾ ವೈರಸ್ ಹರಡಿರುವ ವಿಚಾರವಾಗಿ ಚೀನಾವನ್ನು ದೂಷಿಸುತ್ತಿವೆ.
ಗುರುವಾರ, ಯುಎಸ್ ಅಧ್ಯಕ್ಷ ಟ್ರಂಪ್, ವೈರಸ್ ಹರಡುವಿಕೆಯನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ಚೀನಾವನ್ನು ಶಿಕ್ಷಿಸಲು ಸುಂಕ(tariff)ವನ್ನು ಒಂದು ಸಾಧನವಾಗಿ ಬಳಸುವ ಬಗ್ಗೆ ಸುಳಿವು ನೀಡಿದ್ದರು. ಅದರ ಮರುದಿನವೇ ಮಾರುಕಟ್ಟೆಗಳು ಕುಸಿದಿತ್ತು. ಆದ್ರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಟ್ರಂಪ್ ಆರೋಪವನ್ನು ತಳ್ಳಿಹಾಕಿದೆ.
ವೈರಸ್ ನೈಸರ್ಗಿಕ ಮೂಲದಿಂದ ಹುಟ್ಟಿದೆ ಎಂದ WHO:
ಕೊರೊನಾ ವೈರಸ್ ಚೀನಾದ ಪ್ರಯೋಗಾಲಯದಲ್ಲಿ ಹುಟ್ಟಿದ್ದು ಎಂಬ ಟ್ರಂಪ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಸ್ಥಿತಿಯ ಮುಖ್ಯಸ್ಥರಾದ ಡಾ. ಮೈಕೆಲ್ ರಯಾನ್, ಈ ವೈರಸ್ ಯಾವುದೋ ನೈಸರ್ಗಿಕ ಮೂಲದಲ್ಲಿ ಹುಟ್ಟಿದ್ದು ಎಂದು ತಿಳಿಸಿದ್ದಾರೆ.
ಜೀನ್ ಅನುಕ್ರಮಗಳು ಮತ್ತು ವೈರಸ್ ಅನ್ನು ನೋಡಿದ ಅನೇಕ ವಿಜ್ಞಾನಿಗಳೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಮಾತನಾಡಿದ್ದು, ಈ ವೈರಸ್ ನೈಸರ್ಗಿಕ ಮೂಲದ್ದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ರಯಾನ್ ಹೇಳಿದ್ದಾರೆ.