ಸ್ಟಾಕ್ಹಾಮ್: 2020ರ ನೊಬೆಲ್ ವೈದ್ಯಕೀಯ ಪ್ರಶಸ್ತಿ ಪ್ರಕಟಗೊಂಡಿದ್ದು, ಈ ಬಾರಿ ಮೂವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ‘ಹೆಪಟೈಟಿಸ್ ಸಿ’ ವೈರಸ್ ಪತ್ತೆ ಹಚ್ಚಿದ್ದಕ್ಕಾಗಿ ಅಮೆರಿಕ ಮೂಲದವರಾದ ಹಾರ್ವೆ ಜೆ ಅಲ್ಟರ್, ಮೈಕಲ್ ಹಾಗ್ಟನ್, ಚಾರ್ಲ್ಸ್ ಎಂ.ರೈಸ್ಗೆ ನೊಬೆಲ್ ನೀಡಿ ಗೌರವಿಸಲಾಗಿದೆ.
ಈ ಮೂವರು ಯಕೃತದ ಉರಿಯೂತಕ್ಕೆ ಕಾರಣವಾಗುವ ಹೆಪಟೈಟಿಸ್ ಸಿ ವೈರಸ್ ಮೂಲವನ್ನು ಕಂಡು ಹಿಡಿಯಲು ಯಶಸ್ವಿಯಾಗಿದ್ದಾರೆ. . ಈ ವೈರಸ್ ಅನ್ನು ಕೇವಲ ಎ ಮತ್ತು ಬಿ ವೈರಸ್ಗಳಿಂದ ವಿವರಿಸಲು ಸಾಧ್ಯವಾಗಲ್ಲ. ಈ ವೈದ್ಯರ ಸಾಧನೆ ಇಂದು ಲಕ್ಷಾಂತರ ಜನರ ಜೀವ ಉಳಿಸಲು ಔಷಧ ಕಂಡು ಹಿಡಿಯಲು ಸಹಕಾರಿಯಾಗಿದೆ ಎಂದು ಸಮಿತಿ ಮೆಚ್ಚುಗೆ ಸೂಚಿಸಿದೆ.
ಹತ್ತಾರು ವರ್ಷಗಳಿಂದ ಯಕೃತದ ಉರಿಯೂತ(ಲಿವರ್ ಸಮಸ್ಯೆ) ದಿಂದ ಬಳಲುತ್ತಿದ್ದವರಿಗೆ ಈ ಸಂಶೋಧನೆ ಔಷಧ ಕಂಡು ಹಿಡಿಯಲು ಸಹಕಾರಿಯಾಗಿದೆ. ಮೊದಲಿಗೆ ಯಕೃತ್ ನಲ್ಲಿ ಕಾಣಿಸಿಕೊಳ್ಳುವ ಈ ರೋಗ ಬಳಿಕ ಲಿವರ್ ಕ್ಯಾನ್ಸರ್ಗೆ ತಿರುಗಿ ಮನುಷ್ಯರ ಜೀವವನ್ನೇ ಬಲಿ ಪಡೆಯುತ್ತಂತೆ. ಈ ಸಂಶೋಧನೆಯಿಂದ ಇದೇ ಮೊದಲ ಬಾರಿಗೆ ವೈದ್ಯಕೀಯ ಲೋಕದಲ್ಲಿ ಈ ರೋಗವನ್ನ ಗುಣಪಡಿಸಬಹುದು ಜತೆಗೆ ಈ ವೈರಸ್ ಅನ್ನು ಜಾಗತಿಕವಾಗಿ ನಿರ್ಮೂಲನೆ ಮಾಡಬಹುದೆಂಬ ಭರವಸೆ ಹುಟ್ಟಿದೆ.
ವೈರಸ್ ಹರಡುವಿಕೆ ಹೇಗೆ..?
1940 ರಲ್ಲಿ ಮೊದಲ ಬಾರಿಗೆ ಈ ವೈರಸ್ ಕಾಣಿಸಿಕೊಂಡಿತು. ಈ ರೋಗ ಎ ಮತ್ತು ಬಿ ಎರಡು ವಿಧಗಳಾಗಿ ಕಾಣಿಸಿಕೊಳ್ಳಲಿದ್ದು, ಎ ವೈರಸ್ ಕಲುಷಿತ ಆಹಾರ, ನೀರು ಸೇವನೆಯಿಂದ ಹರಡುತ್ತದೆ. ಬಿ ವೈರಸ್ ರಕ್ತದಿಂದ ಹರಡಲಿದ್ದು, ದೀರ್ಘಕಾಲಿಕ ರೋಗವಾಗಿರುತ್ತೆ. 1976 ರಲ್ಲಿ ಬ್ಲಂಬರ್ಗ್ ಎಂಬುವವರು ಈ ವೈರಸ್ ಕಂಡು ಹಿಡಿದು ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದರು.
ಈ ವೈರಸ್ಗೆ ಹೆಪಟೈಟಿಸ್ ಸಿ ಹೆಸರು ಬಂದಿದ್ದು ಹೇಗೆ?
ಮೈಕಲ್ ಹಂಗ್ಟನ್ ಈ ವೈರಸ್ ಕಂಡು ಹಿಡಿಯಲು ಚಿರೋನ್ನ ಫಾರ್ಮಾಸುಟಿಕಲ್ಸ್ ಫರ್ಮ್ನಲ್ಲಿ ಅಧ್ಯಯನ ಮಾಡ್ತಾರೆ. ಹಾಂಗ್ಟನ್ ಮತ್ತು ಅವರ ಸಹೋದ್ಯೋಗಿಗಳು ಸೋಂಕಿತ ಚಿಂಪಾಂಜಿಯ ರಕ್ತದಲ್ಲಿ ಕಂಡುಬರುವ ನ್ಯೂಕ್ಲಿಯಿಕ್ ಆಮ್ಲಗಳಿಂದ ಡಿಎನ್‌ಎ ತುಣುಕುಗಳ ಸಂಗ್ರಹಿಸಿ ಅಧ್ಯಯನ ಮುಂದುವರೆಸಿದರು. ಈ ತುಣುಕುಗಳಲ್ಲಿ ಹೆಚ್ಚಿನವು ಚಿಂಪಾಂಜಿಯ ಜೀನ್ಸ್ನಿಂದಲೇ ಬಂದಿದ್ದರೂ ಕೆಲವು ಅಪರಿಚಿತ ವೈರಸ್‌ನಿಂದ ಹುಟ್ಟಿಕೊಳ್ಳುತ್ತವೆ ಎಂದು ಸಂಶೋಧಕರು ಕಂಡುಕೊಂಡರು. ಈ ಕ್ಲೋನ್ ಅನ್ನು ಫ್ಲವಿವೈರಸ್ ಕುಟುಂಬಕ್ಕೆ ಸೇರಿದ ಆರ್ಎನ್ಯ ವೈರಸ್‌ನಿಂದ ಹರಡುತ್ತದೆ ಎಂದು ಗುರುತಿಸಲಾಗಿದ್ದು, ಅದಕ್ಕೆ ಹೆಪಟೈಟಿಸ್ ಸಿ ವೈರಸ್ ಎಂದು ಹೆಸರಿಸಲಾಯಿತು.
ಈ ರೋಗಕ್ಕೆ ಬಲಿಯಾಗುವವರ ಸಂಖ್ಯೆ ಎಷ್ಟು ಗೊತ್ತಾ?
ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ 7 ಕೋಟಿಗೂ ಅಧಿಕ ಮಂದಿಯಲ್ಲಿ ಈ ರೋಗ ಕಾಣಿಸಿಕೊಂಡಿದೆ. ವರ್ಷಕ್ಕೆ ಸುಮಾರು 4 ಲಕ್ಷ ಜನರು ಸಾಯುತ್ತಾರೆ ಎನ್ನಲಾಗಿದೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲ ದೇಶಗಳಲ್ಲಿಯೂ ವೈರಸ್ಗೆ ಲಸಿಕೆ ಕಂಡು ಹಿಡಿಯುವಲ್ಲಿ ಶ್ರಮಿಸಿದ್ದರು. ಈ ವೇಳೆ ಈ ಮೂವರು ಹೆಪಟೈಟಿಸ್ ಸಿ ಕಂಡು ಹಿಡಿದಿರೋದು ಐತಿಹಾಸಿಕ ಗಳಿಗೆ ಆಗಿದೆ ಎಂದು ನೊಬೆಲ್ ಕಮಿಟಿ ಬಣ್ಣಿಸಿದೆ.
ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (1,118,000 ಡಾಲರ್, 8,18,93,835 ರೂ) ಬಹುಮಾನವನ್ನು ಒಳಗೊಂಡಿದೆ.