ನ್ಯೂಯಾರ್ಕ್: ಕೋವಿಡ್-19 ತಡೆಯಲು ಇರುವ ಏಕೈಕ ಮಾರ್ಗ ಅಂದ್ರೆ ಅದು ಮಾಸ್ಕ್ ಧರಿಸುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಕೆಲವು ಮಾರ್ಗ ಸೂಚಿಗಳಿಂದ ಮಾತ್ರ ಕೋವಿಡ್ ನಿಯಂತ್ರಿಸಬಹುದು ಎಂದು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಆದ್ರೆ ಕೆಲವರಿಗೆ ಮಾಸ್ಕ್ ಧರಿಸುವುದೆಂದರೆ ಏನೋ ಅನಾದರ.
ಮಾಸ್ಕ್ ಧರಿಸುವುದರಿಂದ ಲಕ್ಷಾಂತರ ಮಂದಿ ಕೋವಿಡ್-19 ಸೋಂಕು ಹರಡುವುದರಿಂದ ಪಾರಾಗಿದ್ದಾರೆ ಎಂದು ಹೊಸ ಅಧ್ಯಯನ ನಡೆಸಿರುವ ಅಮೆರಿಕದ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆ ಹೇಳಿದೆ.
ಸೋಂಕು ಹರಡುವಿಕೆ ವಿಶ್ವದಾದ್ಯಂತ ಹೆಚ್ಚಾಗುತ್ತಲೇ ಇದೆ. ಉತ್ತರದ ಇಟಲಿಯಲ್ಲಿ ಏಪ್ರಿಲ್ 6 ರಂದು ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಜಾರಿಗೊಳಿಸಿತ್ತು. ಏಪ್ರಿಲ್ 17 ರಂದು ನ್ಯೂಯಾರ್ಕ್ ನಗರದಲ್ಲಿ ಈ ಆದೇಶವನ್ನು ಜಾರಿ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಜಾಗತಿಕವಾಗಿ ಸೋಂಕು ಹೆಚ್ಚಾಗಿ ಹರಡಿದೆ ಎಂದು ಅಧ್ಯಯನ ಹೇಳಿದೆ.
ನ್ಯೂಯಾರ್ಕ್‌ನಲ್ಲಿ ಮಾಸ್ಕ್ ಧರಿಸಿದ್ದರಿಂದ ನಿತ್ಯ ಸೋಂಕು ಹರಡುವ ಪ್ರಮಾಣ ಶೇಕಡಾ 3 ರಷ್ಟು ಕಡಿಮೆಯಾಗಿದೆ ಎಂದು ಸಂಶೋಧನೆ ಹೇಳಿದೆ. ಉಳಿದಂತೆ ಇತರ ದೇಶಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗಿದೆ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ.
ನೇರ ಸಂಪರ್ಕದ ಮುನ್ನಚ್ಚರಿಕಾ ಕ್ರಮಗಳು
ಮಾಸ್ಕ್ ಧರಿಸುವ ನಿಯಮ ಜಾರಿಗೆ ಬರುವುದಕ್ಕೂ ಮುನ್ನ ಇಟಲಿ ಮತ್ತು ನ್ಯೂಯಾರ್ಕ್‌ನಲ್ಲಿ ಸಾಮಾಜಿಕ ಅಂತರ, ಕ್ವಾರಂಟೈನ್, ಐಸೋಲೇಷನ್, ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಜಾರಿ ಮಾಡಲಾಗಿತ್ತು. ಆದ್ರೆ ಮಾಸ್ಕ್ ಕಡ್ಡಾಯ ಮಾಡಿದ ನಂತರ ನೇರವಾಗಿ ವೈರಸ್ ಹರಡುವಿಕೆ ಕಡಿಮೆಯಾಗಿದೆ ಎಂದು ಸಂಶೋಧಕರು ವಿವರಿಸಿದ್ದಾರೆ.
ಸೋಂಕಿತನಿಂದ ವೈರಸ್‌ಗಳು ಹೊರಬರುತ್ತದೆ. ಮುಖವನ್ನು ಮುಚ್ಚಿಕೊಳ್ಳುವುದರಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಯಬಹುದು. ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ, ಜನ ಸೇರುವಿಕೆ, ಜೋರಾಗಿ ಕಿರುಚುವುದು, ಹಾಡುವಾಗ ಮಾಸ್ಕ್ ಧರಿಸುವುದರಿಂದ ಕೋವಿಡ್ ಹರಡುವಿಕೆ ನಿಯಂತ್ರಿಸಬಹುದು ಎಂದು ಹೇಳಿದೆ.