ಡೆಟ್ರಾಯಿಟ್(ಅಮೆರಿಕ): ನೀವು ಮತ ಚಲಾಯಿಸುವ ಮುನ್ನ ನಿಮ್ಮ ಮನಸನ್ನೊಮ್ಮೆ ಕೇಳಿ, ನೀವು ಮತ ಹಾಕುವ ಅಭ್ಯರ್ಥಿ ನಿಮ್ಮ ಮನಸ್ಸಿನಿಂದ ಬಂದಿರಬೇಕು, ನಿಮ್ಮ ಹೃದಯದಿಂದ ನೀವು ಮತ ಚಲಾಯಿಸಿ ಎಂದು ಮಸಾಚುಸೆಟ್ಸ್ ಸೆನೆಟರ್(ಸಂಸದೆ) ವಾರೆನ್ ಎಲಿಜಬೆತ್ ಅಮೆರಿಕ ಜನತೆಗೆ ಕರೆ ನೀಡಿದ್ದಾರೆ.
ನಿನ್ನೆ ಡೆಟ್ರಾಯಿಟ್ನಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ವಾರೆನ್, ನಾನು ಡೊನಾಲ್ಡ್ ಟ್ರಂಪ್ರನ್ನು ಸೋಲಿಸಬೇಕು ಎಂದು ಪಣ ತೊಟ್ಟಿರುವ ಮಹಿಳೆಯಾಗಿದ್ದೇನೆ, ಹಾಗೂ ಸೆನೆಟ್ನಲ್ಲಿರುವ ಮಿಚ್ ಮೆಕ್‌ಕಾನ್ನೆಲ್ ಅವರನ್ನು ಕೆಲಸದಿಂದ ಹೊರಹಾಕಲು ಯತ್ನಿಸುತ್ತೇನೆ ಎಂದಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಕೆಲವು ಪಂಡಿತರು ಮತದಾನವೆಂಬುದನ್ನು ಕೆಲವು ಸಂಕೀರ್ಣ ತಂತ್ರಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ, ಇದರಿಂದಾಗಿ ಅಮೆರಿಕದ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದು, ಪರೋಕ್ಷವಾಗಿ ಟ್ರಂಪ್ ವಿರುದ್ಧ ಕಿಡಿ ಕಾರಿದ್ದಾರೆ.
ನೀವು ಚಲಾಯಿಸುವ ಮತ ನಿಮಗೆ ಹೆಮ್ಮೆ ತರುವಂತಹದ್ದಾಗಿರಬೇಕು, ನೀವು ಹಾಕಿರುವ ಮತ ನಿಮ್ಮ ಮನಸ್ಸಿಗೆ ಒಪ್ಪಿಗೆಯಾಗಿರಬೇಕು. ನಿಮ್ಮ ಒಂದು ಮತದಿಂದ ಅಮೆರಿಕದ ಅತ್ಯುತ್ತಮ ಅಧ್ಯಕ್ಷರಾಗಲು ಸಾಧ್ಯ, ಆದ್ದರಿಂದ ನೀವು ಹಾಕುವ ಮತ ನಿಮ್ಮದಾಗಿರಲಿ, ನಿಮ್ಮ ಹೃದಯದಿಂದ ಮತ ಚಲಾಯಿಸಿ ಎಂದು ವಾರೆನ್ ಸಲಹೆ ನೀಡಿದ್ದಾರೆ. ದೇಶದ ಆರ್ಥಿಕತೆ ಗಂಭೀರ ಸ್ಥಿತಿಯಲ್ಲಿದ್ದು, ಅದನ್ನ ಕಾಪಾಡಬೇಕಾದರೆ ಟ್ರಂಪ್ ಅವರನ್ನ ಆಡಳಿತದಿಂದ ತೊಲಗಿಸಲೇಬೇಕು ಎಂದು ಹೇಳಿದ್ದಾರೆ.
ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಸ್ಯಾಂಡರ್ಸ್, ಬ್ಯೂಮ್ಬರ್ಗ್ ಹಾಗೂ ಬಿಡೆನ್ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಲಾವೋ ಕಾಕಸ್ ಚುನಾವಣೆ ಭರದಿಂದ ಸಾಗಿದೆ.