ವಾಷಿಂಗ್ಟನ್: ಕೊರೊನಾ ವೈರಸ್ ಚೀನಾದ ವುಹಾನ್‌ನಲ್ಲಿ ಹುಟ್ಟಿಕೊಂಡಿದೆ ಎಂಬುದನ್ನು ಅರ್ಥಮಾಡಿಸಲು ಅಮೆರಿಕ ಇತರ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.
ವೈರಸ್ ಎಲ್ಲಿಂದ ಬಂತು ಎಂಬುದನ್ನು ವಿವರಿಸಲು ಬೀಜಿಂಗ್ ಮೇಲೆ ಸಾಕಷ್ಟು ಒತ್ತಡ ಇತ್ತು ಎಂದ ಪೊಂಪಿಯೊ, 2019ರ ಡಿಸೆಂಬರ್ ವೇಳೆಗೆ ಚೀನಾಕ್ಕೆ ವೈರಸ್ ಬಗ್ಗೆ ತಿಳಿದಿತ್ತು ಎಂದು ಆರೋಪಿಸಿದರು.
ಅಮೆರಿಕದಲ್ಲಿನ ಸಾವುಗಳಿಗೆ ಮತ್ತು ಅಮೆರಿಕದ ಮೇಲೆ ಉಂಟಾಗಿರುವ ಅಪಾರ ಆರ್ಥಿಕ ವೆಚ್ಚಗಳಿಗೆ ಜವಾಬ್ದಾರರಾಗಿರುವವರನ್ನು ಹೊಣೆಗಾರರನ್ನಾಗಿ ಮಾಡಬೇಕಾಗಿದೆ. ಇಡೀ ಜಾಗತಿಕ ಆರ್ಥಿಕ ವ್ಯವಸ್ಥೆ ನಾಶಪಡಿಸಲಾಗಿದೆ ಎಂದರು.
ರಾಜತಾಂತ್ರಿಕವಾಗಿ ಪ್ರಪಂಚದಾದ್ಯಂತದ ದೇಶಗಳಿಗೆ ಸರಿಯಾಗಿ ಕೆಲಸ ಮಾಡಲು ನೆರವಾಗುತ್ತೇವೆ. ಅವರ ಆರ್ಥಿಕತೆಯನ್ನು ಮತ್ತೆ ಆರಂಭಿಸಲು ಸಹಾಯದ ಹಸ್ತಚಾಚುತ್ತೇವೆ. ಒಳ್ಳೆಯ ಸಮಯ ಒದಗಿ ಬಂದರೆ ಅಂತಾರಾಷ್ಟ್ರೀಯ ಪ್ರಯಾಣವನ್ನ ಹಿಂದಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂಬುದನ್ನು ಖಚಿತಪಡಿಸುತ್ತೇವೆ. ಜಾಗತಿಕ ವಾಣಿಜ್ಯ ಮತ್ತೆ ಆರಂಭಗೊಳ್ಳಬಹುದು ಎಂದು ಹೇಳಿದರು.
ಇದು ನಿಜಕ್ಕೂ ಚೀನಾದ ವುಹಾನ್‌ನಲ್ಲಿ ಹುಟ್ಟಿದ ವೈರಸ್ ಎಂಬುದನ್ನು ಅವರು ಅರ್ಥಮಾಡಿಕೊಳ್ಳಲು ನಾವು ಇತರ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. 2019ರ ಡಿಸೆಂಬರ್ ವೇಳೆಗೆ ಚೀನಾ ಸರ್ಕಾರಕ್ಕೆ ಈ ಬಗ್ಗೆ ಖಚಿತವಾಗಿ ತಿಳಿದಿತ್ತು ಎಂದು ಪೊಂಪಿಯೊ ಆಪಾದಿಸಿದ್ದಾರೆ.
ಅವರು (ಚೀನಾ) ಒಂದು ರಾಷ್ಟ್ರವಾಗಿ ತಮ್ಮ ಮೂಲಭೂತ ಕಟ್ಟುಪಾಡುಗಳನ್ನು ಅನುಸರಿಸುವಲ್ಲಿ ವಿಫಲರಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳನ್ನು ಪಾಲಿಸುವಲ್ಲಿಯೂ ವಿಫಲರಾಗಿದ್ದಾರೆ ಎಂದರು.