ವಾಷಿಂಗ್ಟನ್: ಪೂರ್ವ ಲಡಾಖ್ನಲ್ಲಿ ಉಲ್ಬಣವಾಗಿರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಭಾರತ ಮತ್ತು ಚೀನಾ ನಡೆಸುತ್ತಿರುವ ಪ್ರಯತ್ನಗಳನ್ನು ಅಮೆರಿಕ ಸ್ವಾಗತಿಸಿದೆ.
ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಿಂದ ಭಾರತ ಮತ್ತು ಚೀನಾ ಸೇನೆಗಳು ಹಿಂದೆ ಸರಿಯುವ ಒಪ್ಪಂದ ಮಾಡಿಕೊಂಡಿರುವುದಾಗಿ ನಿನ್ನೆ ಸಂಸತ್ತಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.
ಈ ನಿರ್ಧಾರವನ್ನು ಸ್ವಾಗತಿಸಿರುವ ಅಮೆರಿಕ ರಾಜ್ಯ ಇಲಾಖೆಯ ವಕ್ತಾರ, ಎರಡೂ ರಾಷ್ಟ್ರಗಳು ಶಾಂತಿಯುತ ನಿರ್ಣಯದತ್ತ ಹೆಜ್ಜೆ ಹಾಕುತ್ತಿರುವುದರಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವ ನಮ್ಮ ಕೆಲಸವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಚೀನಾ- ಭಾರತ ಗಡಿ ಘರ್ಷಣೆಗೆ ಅಂತ್ಯ ಹಾಡುವ ಕಾಲ ಸಮೀಪಿಸಿದೆ: ರಾಜನಾಥ್ ಸಿಂಗ್ ವಿಶ್ವಾಸ
ಅಮೆರಿಕ ಕಾಂಗ್ರೆಸ್ನ ಸದಸ್ಯ ಹಾಗೂ ರಿಪಬ್ಲಿಕನ್ ಪಕ್ಷದ ಮುಖಂಡರಾಗಿರುವ ಮೈಕೆಲ್ ಮೆಕ್ಕಾಲ್ ಕೂಡ ಸೇನೆಗಳು ಹಿಂದೆ ಸರಿಯುತ್ತಿರುವುದನ್ನು ಶ್ಲಾಘಿಸಿದ್ದು, "ಭಾರತವು ತನ್ನ ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ದೃಢವಾಗಿ ನಿಂತಿರುವುದು ಉತ್ತಮವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.