ವಾಷಿಂಗ್ಟನ್: ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಈ ಹಿನ್ನೆಲೆ ಮಂಗಳವಾರದಿಂದ ಅಮರಿಕಕ್ಕೆ ಭಾರತದಿಂದ ಪ್ರಯಾಣ ಮಾಡುವುದನ್ನು ನಿರ್ಬಂಧಿಸಲಿದೆ.
ಈ ನೀತಿ ಅಮೆರಿಕನ್ ನಾಗರಿಕರು, ಕಾನೂನುಬದ್ಧ ಶಾಶ್ವತ ನಿವಾಸಿಗಳು ಅಥವಾ ಇತರ ವಿನಾಯಿತಿ ಪಡೆದ ಜನರಿಗೆ ಅನ್ವಯಿಸುವುದಿಲ್ಲ ಎಂದು ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಸಲಹೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ. ಈ ನಿಯಮ ಮೇ 4 ರಿಂದ ಜಾರಿಯಾಗಲಿದೆ.
ಮಾರಕ ಎರಡನೇ ಕೊರೊನಾ ಅಲೆಯಿಂದ ಭಾರತ ತತ್ತರಿಸುತ್ತಿದೆ. ದೇಶದಲ್ಲಿ ಶುಕ್ರವಾರ 3.86 ಲಕ್ಷ ಹೊಸ ಕೋವಿಡ್ -19 ಪ್ರಕರಣಗಳು ಮತ್ತು 3,498 ಸಾವುಗಳು ವರದಿಯಾಗಿವೆ.
COVID-19 ಪ್ರಕರಣಗಳು ಏಪ್ರಿಲ್‌ನಲ್ಲಿ ಗಗನಕ್ಕೇರುತ್ತಿದ್ದಂತೆ, ಕೊರೊನಾ ಅಲೆ ಇನ್ನೂ ಹೆಚ್ಚಿಗೆ ಇರಲಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭಾರತಕ್ಕೆ ಪ್ರಯಾಣ ಬೆಳೆಸುವವರಿಗೆ ಎಚ್ಚರಿಕೆ ನೀಡಿದೆ. ಇನ್ನು ಈಗಾಗಲೇ ಅನೇಕ ದೇಶಗಳು ಭಾರತದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿವೆ. ಕೆನಡಾ ಮತ್ತು ಯುಎಇ ಸೇರಿದಂತೆ ದೇಶಗಳು ಭಾರತದಿಂದ ಪ್ರಯಾಣಿಕರ ಹಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿವೆ. ಯುನೈಟೆಡ್ ಕಿಂಗ್‌ಡಮ್ ಭಾರತವನ್ನು ಮುನ್ನೆಚ್ಚರಿಕೆ ಆಧಾರದ ಮೇಲೆ ತನ್ನ ಪ್ರಯಾಣವನ್ನು ಕೆಂಪು ಪಟ್ಟಿಗೆ ಸೇರಿಸಿದೆ.