ವಾಷಿಂಗ್ಟನ್ (ಅಮೆರಿಕ): ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿದೇಶಾಂಗ ನೀತಿಯಿಂದಾಗಿ ಪಾಕಿಸ್ತಾನ ಹಾಗೂ ಚೀನಾ ಸಂಬಂಧ ಗಟ್ಟಿಯಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ನಮ್ಮ ಬೆಂಬಲವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ವಕ್ತಾರ ನೆಡ್ ಪ್ರೈಸ್, ಈ ವಿಚಾರ ಪಾಕಿಸ್ತಾನ ಹಾಗೂ ಚೀನಾಗೆ ಬಿಟ್ಟಿದ್ದು, ನಾವು ಖಂಡಿತವಾಗಿಯೂ ರಾಹುಲ್ ಗಾಂಧಿ ಅವರ ಟೀಕೆಗಳನ್ನು ಅನುಮೋದಿಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಸರ್ಕಾರ ಚೀನಾ, ಪಾಕಿಸ್ತಾನ ಒಟ್ಟಿಗೆ ತಂದಿದೆ ಎಂದ ರಾಹುಲ್: ಸಚಿವ ಜೈಶಂಕರ್ ತಿರುಗೇಟು
ಪ್ರಧಾನಿ ಮೋದಿಯವರ ನಿಷ್ಪರಿಣಾಮಕಾರಿ ವಿದೇಶಾಂಗ ನೀತಿಗಳಿಂದಾಗಿ ಚೀನಾ ಮತ್ತು ಪಾಕಿಸ್ತಾನ ಎಂದಿಗಿಂತಲೂ ಹತ್ತಿರವಾಗಿವೆ. ಇದು ಭಾರತದ ವಿರುದ್ಧದ ಏಕೈಕ ದೊಡ್ಡ ಅಪರಾಧ ಎಂದು ಬುಧವಾರ ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಗಾ ವಾಗ್ದಾಳಿ ನಡೆಸಿದ್ದರು.
ಇದಕ್ಕೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿರುಗೇಟು ನೀಡಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದ ವೇಳೆ ಚೀನಾ ಮತ್ತು ಪಾಕಿಸ್ತಾನ ಒಟ್ಟಿಗೆ ಕೆಲಸ ಮಾಡಿದ ಉದಾಹರಣೆಗಳಿವೆ. ಪಾಕಿಸ್ತಾನ ಮತ್ತು ಚೀನಾವನ್ನ ಒಟ್ಟಿಗೆ ತಂದಿದ್ದು ಇದೇ ಕಾಂಗ್ರೆಸ್ ಸರ್ಕಾರ ಎಂದು ಹೇಳಿದ್ದಾರೆ.