ನವದೆಹಲಿ: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಜೆ. ಬ್ಲಿಂಕೆನ್ 2 ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಜುಲೈ 27 ದೆಹಲಿಗೆ ಆಗಮಿಸಲಿದ್ದಾರೆ. ಯುಎಸ್ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ಅವರ ಮೊದಲ ಭೇಟಿಯಾಗಿದೆ.
ಜುಲೈ 28 ರಂದು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಬ್ಲಿಂಕೆನ್ ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಉಭಯ ದೇಶಗಳ ನಾಯಕರ ಮಾತುಕತೆ ವೇಳೆ ನೆರೆಯ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ಹಿಂತೆಗೆತ ಬಳಿಕ ಉಂಟಾಗಿರುವ ಅಸ್ಥಿರತೆ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ. ಚೀನಾ ಹಾಗೂ ಇತರೆ ನೆರೆಯ ದೇಶಗಳಿಂದ ಸವಾಲುಗಳ ಹಿನ್ನೆಲೆಯಲ್ಲಿ 1990 ರಿಂದಲೂ ಭಾರತಕ್ಕೆ ಅಮೆರಿಕ ತುಂಬಾ ಹತ್ತಿರವಾಗಿದೆ.
ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ತಮ್ಮ ಮೊದಲ ವಿದೇಶ ಪ್ರವಾಸದ ಭಾಗವಾಗಿ ನವದೆಹಲಿಗೆ ಭೇಟಿ ನೀಡಿದ್ದರು. ಆದರೆ ಭಾರತದಲ್ಲಿನ ಕೋವಿಡ್ ಪ್ರಕರಣಗಳು ತೀವ್ರ ಏರಿಕೆಯಿಂದಾಗಿ ಬ್ಲಿಂಕೆನ್ ಅವರ ಪ್ರಯಾಣವನ್ನು ಈ ಹಿಂದೆ ಮುಂದೂಡಿದ್ದರು.