ವಾಷಿಂಗ್ಟನ್: ಸಂಪೂರ್ಣವಾಗಿ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ), ಇದೀಗ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯವೆಂದು ಹೇಳಿದೆ.
ಎಲ್ಲಾ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗುವುದಿಲ್ಲ. ಹೀಗಾಗಿ 2020-2021ರ ಶೈಕ್ಷಣಿಕ ವರ್ಷದಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಶಾಲೆಗಳಲ್ಲಿ ಕಿಂಡರ್ ಗಾರ್ಟನ್ನಿಂದ 12ನೇ ಗ್ರೇಡ್ವರೆಗಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾಸ್ಕ್ ಹಾಕುವುದನ್ನು ಮುಂದುವರಿಸಬೇಕು. ಶಾಲೆ, ಸ್ಕೂಲ್ ಬಸ್ಗಳಲ್ಲಿ ದೈಹಿಕ ಅಂತರವನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಸಂಪೂರ್ಣವಾಗಿ ಲಸಿಕೆ ಪಡೆದವರು ಮಾಸ್ಕ್ ಧರಿಸಬೇಕಿಲ್ಲ- ಅಮೆರಿಕ
ಎರಡು ದಿನಗಳ ಹಿಂದಷ್ಟೇ ಹೊಸ ಕೋವಿಡ್ ಮಾರ್ಗಸೂಚಿ ಹೊರಡಿಸಿದ್ದ ಸಿಡಿಸಿ, ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದವರಿಗೆ ಮಾಸ್ಕ್ ಅವಶ್ಯಕತೆ ಇಲ್ಲ. ದೈಹಿಕ ಅಂತರ ಕಾಯ್ದುಕೊಳ್ಳಬೇಕಿಲ್ಲ. ದೇಶದೊಳಗೆ ಪ್ರಯಾಣಿಸುವವರು ಕ್ವಾರಂಟೈನ್ಗೆ ಒಳಪಡುವ ಅಗತ್ಯತೆಯೂ ಇಲ್ಲ ಎಂದಿತ್ತು.
ಸಿಡಿಸಿ ಮಾರ್ಗಸೂಚಿಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಶ್ಲಾಘಿಸಿದ್ದರು. "ಲಸಿಕೆ ಪಡೆಯಿರಿ ಅಥವಾ ವ್ಯಾಕ್ಸಿನ್ ಹಾಕಿಸಿಕೊಳ್ಳುವವರೆಗೂ ಮಾಸ್ಕ್ ಧರಿಸಿ" ಎಂದು ಅವರು ಮಾಸ್ಕ್ ಧರಿಸದೇ ಶ್ವೇತಭವನದ ಎದುರು ಮಾಧ್ಯಮಗಳ ಮುಂದೆ ಬಂದು ಹೇಳಿದ್ದರು.