ವಾಷಿಂಗ್ಟನ್: ಕಳೆದ ನವೆಂಬರ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ಸಹಾಯ ಮಾಡಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವ್ಯಾಪಕ ಕಾರ್ಯಾಚರಣೆ ನಡೆಸಿದರು ಎಂದು ಡಿಕ್ಲಾಸಿಫೈಡ್ ಗುಪ್ತಚರ ಮೌಲ್ಯಮಾಪನ ತಿಳಿಸಿದೆ.
ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯಿಂದ ಮಂಗಳವಾರ ಬಿಡುಗಡೆಯಾದ ವರದಿಯಲ್ಲಿ, 2020 ರ ಚುನಾವಣೆಯಲ್ಲಿ ವಿದೇಶದಿಂದ ಬೆದರಿಕೆಗಳು ಎದುರಾಗಿದ್ದವು ಎಂದು ಹೇಳಲಾಗಿದೆ. ಮತದಾನ ಪ್ರಕ್ರಿಯೆಯ ಮೇಲಿನ ವಿಶ್ವಾಸಾರ್ಹತೆಯನ್ನು ಹಾಳು ಮಾಡಲು ಹಾಗೂ ಟ್ರಂಪ್ ಅಧ್ಯಕ್ಷರಾಗಿ ಪುನರಾಯ್ಕೆ ಆಗದಂತೆ ಇರಾನ್ ಪ್ರಯತ್ನ ಮಾಡಿತ್ತು. ಇಂಥ ಕ್ರಮಗಳ ಮೂಲಕ ಬೈಡನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡುವುದು ಅವರ ಉದ್ದೇಶವಾಗಿತ್ತು ಎಂದು ವರದಿ ತಿಳಿಸಿದೆ.
ಇನ್ನು ಗುಪ್ತಚರ ಅಧಿಕಾರಿಗಳು ನೀಡಿದ ವರದಿಯಲ್ಲಿ, 2020ರ ಯುಎಸ್ ಚುನಾವಣೆಯಲ್ಲಿ ಯಾವುದೇ ಮತದಾರರ ನೋಂದಣಿ, ಮತ ಚಲಾಯಿಸುವಿಕೆ, ಫಲಿತಾಂಶಗಳನ್ನು ವರದಿ ಮಾಡುವಿಕೆ ಸೇರಿದಂತೆ ಮತದಾನ ಪ್ರಕ್ರಿಯೆಯ ಯಾವುದೇ ತಾಂತ್ರಿಕ ಅಂಶಗಳಲ್ಲಿ ಹಸ್ತಕ್ಷೇಪ ಮಾಡಿದ ಬಗ್ಗೆ ಕಂಡುಬಂದಿಲ್ಲ ಎಂದು ತಿಳಿಸಲಾಗಿದೆ.