ವಾಶಿಂಗ್ಟನ್: ಅಮೆರಿಕದಾದ್ಯಂತ ಕೊರೊನಾ ವೈರಸ್ ಎಲ್ಲೆ ಮೀರಿ ಹರಡುತ್ತಿರುವ ಬೆನ್ನಲ್ಲೇ, ಅದರ ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಉಪಕರಣಗಳು ಬಹುತೇಕ ಖಾಲಿಯಾಗಿವೆ ಎಂಬ ಆತಂಕ ಮನೆ ಮಾಡಿದೆ. ಕೋವಿಡ್-19 ಚಿಕಿತ್ಸೆಗೆ ಅಗತ್ಯವಾಗಿರುವ ಮಾಸ್ಕ್, ಗೌನು, ಕೈಗವಸು ಮುಂತಾದ ವಸ್ತುಗಳ ಸಂಗ್ರಹ ಬಹುತೇಕ ಖಾಲಿಯಾಗಿದೆ.
ತುರ್ತು ಪರಿಸ್ಥಿತಿ ಎದುರಿಸಲು ಸಂಗ್ರಹಿಸಿ ಇಡಲಾಗಿದ್ದ 11.6 ಮಿಲಿಯನ್ ಎನ್-95 ಮಾಸ್ಕ್ಗಳು, 5.2 ಮಿಲಿಯನ್ ಫೇಸ್ ಶೀಲ್ಡ್ಗಳು, 22 ಮಿಲಿಯನ್ ಕೈಗವಸು ಮತ್ತು 7,140 ವೆಂಟಿಲೇಟರ್ಗಳನ್ನು ಫೆಡರಲ್ ಎಮರ್ಜೆನ್ಸಿ ಮ್ಯಾನೇಜಮೆಂಟ್ ಏಜೆನ್ಸಿ ಈಗಾಗಲೇ ಪೂರೈಕೆ ಮಾಡಿದ್ದು, ವೈದ್ಯಕೀಯ ಸಲಕರಣೆಗಳ ಸಂಗ್ರಹ ಖಾಲಿಯಾಗಿದೆ ಎಂದು ಸರ್ಕಾರಿ ಅಧಿಕಾರಿಗಳ ಮೂಲವನ್ನು ಉಲ್ಲೇಖಿಸಿ ಪ್ರಮುಖ ದೈನಿಕವೊಂದು ವರದಿ ಮಾಡಿದೆ. ಇನ್ನು ಕೆಲವೇ ಕೆಲವು ತುರ್ತು ಚಿಕಿತ್ಸಾ ಉಪಕರಣಗಳು ಉಳಿದಿದ್ದು, ತುರ್ತು ಚಿಕಿತ್ಸೆಯಲ್ಲಿ ನಿರತ ಆರೋಗ್ಯ ಸಿಬ್ಬಂದಿಗಾಗಿ ಕಾಯ್ದಿಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ ವೆಂಟಿಲೇಟರ್ ಸೇರಿದಂತೆ ಇನ್ನಿತರ ತುರ್ತು ಚಿಕಿತ್ಸಾ ಸಲಕರಣೆಗಳನ್ನು ಪೂರೈಸುವಂತೆ ಖಾಸಗಿ ಕಂಪನಿಗಳಿಗೆ ಟ್ರಂಪ್ ಸರ್ಕಾರ ಕೇಳಿಕೊಂಡಿದೆ.
"ನಮ್ಮ ವೈದ್ಯರು, ನರ್ಸ್ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯವಿರುವ ಚಿಕಿತ್ಸಾ ಉಪಕರಣಗಳನ್ನು ಸಂಶೋಧಿಸಿ, ತಯಾರಿಸಿ, ಪೂರೈಕೆ ಮಾಡುವಂತೆ ದೇಶದ ಬಹುತೇಕ ಎಲ್ಲ ಪ್ರಮುಖ ಉದ್ಯಮಗಳಿಗೆ ತಿಳಿಸಲಾಗಿದೆ. ಅಮೆರಿಕದ ಉತ್ಪಾದನಾ ಸಾಮರ್ಥ್ಯವನ್ನು ನಾವು ಬಳಸಿಕೊಳ್ಳಲಿದ್ದೇವೆ" ಎಂದು ಅಧ್ಯಕ್ಷ ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.