ವಾಷಿಂಗ್ಟನ್ : ಭಾರತ - ಚೀನಾ ಅಥವಾ ಇನ್ಯಾವುದೇ ರಾಷ್ಟ್ರಗಳ ನಡುವಿನ ಸಂಘರ್ಷದ ವಿಚಾರದಲ್ಲಿ ಯುಎಸ್ ಮಿಲಿಟರಿ ಪ್ರಬಲವಾಗಿಯೇ ಮುಂದುವರಿಯಲಿದೆ ಎಂದು ಶ್ವೇತ ಭವನದ ಉನ್ನತಾಧಿಕಾರಿ ಮಾರ್ಕ್ ಮೆಡೋಸ್ ಸೋಮವಾರ ಹೇಳಿದ್ದಾರೆ. ಯುಎಸ್ ನೌಕಾಪಡೆ ದಕ್ಷಿಣ ಚೀನಾ ಸಮುದ್ರಲ್ಲಿ ಎರಡು ವಿಮಾನವಾಹಕ ನೌಕೆಗಳನ್ನು ನಿಯೋಜಿಸಿದ ನಂತರ ಅವರು ಹೀಗೆ ಹೇಳಿದ್ದಾರೆ.
ನಮ್ಮ ಸಂದೇಶ ಸ್ಪಷ್ಟವಾಗಿದೆ. ನಾವು ಚೀನಾ ಅಥವಾ ಇತರ ಯಾರೇ ಆದರೂ ಅತ್ಯಂತ ಶಕ್ತಿಶಾಲಿ, ಪ್ರಬಲ ಶಕ್ತಿಯಾಗಿರಲು ಅವಕಾಶ ನೀಡುವುದಿಲ್ಲ. ಅದು ಆ ಪ್ರದೇಶದಲ್ಲಿದ್ದರೂ ಅಥವಾ ಇಲ್ಲಿದ್ದರೂ ಇದೇ ನಿಲುವು. ನಮ್ಮ ಮಿಲಿಟರಿ ಬಲವಾಗಿ ನಿಲ್ಲುತ್ತದೆ. ಅದು ಭಾರತ ಮತ್ತು ಚೀನಾ ನಡುವಿನ ಸಂಘರ್ಷವಾಗಿರಲಿ ಅಥವಾ ಬೇರೆಲ್ಲಿಯಾದರೂ ಆಗಿರಲಿ ಎಂದು ಮೆಡೋಸ್ ಹೇಳಿದ್ದಾರೆ.
ಪಂಗೊಂಗ್ ತ್ಸೊ, ಗಾಲ್ವಾನ್ ವ್ಯಾಲಿ ಮತ್ತು ಗೊಗ್ರಾ ಹಾಟ್ ಸ್ಪ್ರಿಂಗ್ ಸೇರಿದಂತೆ ಪೂರ್ವ ಲಡಾಖ್‌ನ ಹಲವು ಪ್ರದೇಶಗಳಲ್ಲಿ ಸುಮಾರು ಎಂಟು ವಾರಗಳ ಕಾಲ ಭಾರತ ಮತ್ತು ಚೀನಾ ಸೈನಿಕರ ನಡುವೆ ಗಡಿ ವಿಚಾರದಲ್ಲಿ ಶೀತಲ ಸಮರ ನಡೆದು, ಬಳಿಕ ಅದು ತಾರಕಕ್ಕೇರಿತು. ಈ ವೇಳೆ, ಚೀನಾ ಸೈನಿಕರ ದಾಳಿಗೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಬಳಿಕ ಎರಡೂ ರಾಷ್ಟ್ರಗಳು ಎಲ್ಎಸಿಯ ಉದ್ದಕ್ಕೂ ಹೆಚ್ಚಿನ ಸೇನೆ ನಿಯೋಜನೆ ಮಾಡಿತ್ತು.
ಕಳೆದ ಭಾನುವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಸುದೀರ್ಘ ಮಾತುಕತೆ ನಡೆಸಿದ ನಂತರ ಚೀನಾದ ಮಿಲಿಟರಿ ಸೋಮವಾರ ಗಾಲ್ವಾನ್ ಕಣಿವೆ ಮತ್ತು ಗೊಗ್ರಾ ಹಾಟ್ ಸ್ಪ್ರಿಂಗ್‌ನಿಂದ ಸೈನ್ಯ ಹಿಂತೆಗೆದುಕೊಂಡಿದೆ.