ವಾಷಿಂಗ್ಟನ್(ಅಮೆರಿಕ): ಮನುಷ್ಯನ ಸರಾಸರಿ ಜೀವಿತಾವಧಿ ಅಮೆರಿಕನ್ನರಲ್ಲಿ ಕಡಿಮೆಯಾಗುತ್ತಿದೆ. ಅದೂ ವರ್ಣಗಳ ಆಧಾರದ ಮೇಲೆ ಜೀವಿತಾವಧಿ ಕಡಿಮೆಯಾಗುತ್ತಿರುವುದಾಗಿ ಬ್ರಿಟಿಷ್ ಮೆಡಿಕಲ್ ಅಸೋಸಿಯೇಷನ್ನ ಪತ್ರಿಕೆಯೊಂದು ಪ್ರಕಟಿಸಿದ ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕದಲ್ಲಿ ವಾಸಿಸುವ ಜನರ ಮೇಲೆ 2020ರ ಜೀವಿತಾವಧಿಯನ್ನು ಆಧಾರವಾಗಿಟ್ಟುಕೊಂಡು ಸಂಶೋಧನೆ ನಡೆಸಲಾಗಿದೆ. ಈ ಸಂಶೋಧನೆಯಿಂದ ತಿಳಿದುಬಂದ ಅಂಶವೇನೆಂದರೆ ಅಮೆರಿಕದಲ್ಲಿನ ಶ್ವೇತ ವರ್ಣೀಯರಲ್ಲಿ ಸರಾಸರಿ ಜೀವಿತಾವಧಿ 1.36 ವರ್ಷ ಕಡಿಮೆಯಾಗಿದೆ.
ಅಮೆರಿಕದಲ್ಲಿ ವಾಸಿಸುವ ಕಪ್ಪು ವರ್ಣೀಯ ಅಮೆರಿಕನ್ನರಲ್ಲಿ 3.88 ವರ್ಷ ಮತ್ತು ಹಿಸ್ಪ್ಯಾನಿಕ್(ಲ್ಯಾಟಿನ್) ಅಮೆರಿಕನ್ನರಲ್ಲಿ 3.88 ವರ್ಷಗಳಷ್ಟು ಸರಾಸರಿ ಜೀವಿತಾವಧಿ ಕಡಿಮೆಯಾಗಿದೆ ಎಂದು ಬ್ರಿಟಿಷ್ ಮೆಡಿಕಲ್ ಅಸೋಸಿಯೇಷನ್ ಮಾಹಿತಿ ನೀಡಿದೆ.
ಅಮೆರಿಕನ್ನರಲ್ಲಿ ಒಟ್ಟಾಗಿ ಅವರ ಸರಾಸರಿ ಜೀವಿತಾವಧಿ ಬಗ್ಗೆ ಲೆಕ್ಕಹಾಕುವುದಾದರೆ ಸುಮಾರು 1.87 ವರ್ಷಗಳಷ್ಟು ಜೀವಿತಾವಧಿ ಕಡಿಮೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.ಈಗ ಅಮೆರಿಕನ್ನರ ಸರಾಸರಿ ಜೀವಿತಾವಧಿ 2020ರಲ್ಲಿ 77.8 ವರ್ಷಗಳಿವೆ. ಭಾರತೀಯರ ಜೀವಿತಾವಧಿ 69.27 ವರ್ಷಗಳಷ್ಟಿದೆ ಎಂದು ವರದಿಯೊಂದು ಹೇಳಿದೆ.
1939ರಿಂದ 1945 ರವರೆಗೆ ನಡೆದ ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕನ್ನರ ಜೀವಿತಾವಧಿಯಲ್ಲಿ ಗಣನೀಯವಾಗಿ ಇಳಿಕೆ ಕಂಡುಬಂದಿತ್ತು. ಅದಾದ ನಂತರ ಈಗ ಭಾರಿ ಪ್ರಮಾಣದಲ್ಲಿ ಸರಾಸರಿ ಜೀವಿತಾವಧಿಯಲ್ಲಿ ಇಳಿಕೆ ಕಂಡುಬಂದಿದೆ ಎಂದು ವರ್ಜೀನಿಯಾ ಕಾಮನ್ವೆಲ್ತ್ ವಿಶ್ವ ವಿದ್ಯಾಲಯ(ವಿಸಿಯು)ದ ಸೊಸೈಟಿ ಆ್ಯಂಡ್ ಹೆಲ್ತ್ ಸೆಂಟರ್ ನಿರ್ದೇಶಕ ಸ್ಟಿವನ್ ವೂಲ್ಫ್ ಅಭಿಪ್ರಾಯಪಟ್ಟಿದ್ದಾರೆ.
ಅಲ್ಪಸಂಖ್ಯಾತರ ಸಂಖ್ಯೆಯೂ ಇಳಿಮುಖ
ಬೇರೆ ರಾಷ್ಟ್ರಗಳಲ್ಲೂ 2018 ಮತ್ತು 2020ರ ಅವಧಿಯಲ್ಲಿ ಸರಾಸರಿ ಜೀವಿತಾವಧಿಯಲ್ಲಿ ಇಳಿಕೆ ಕಂಡುಬಂದಿದೆ. ಆದರೆ ಈ ಸರಾಸರಿ ಜೀವಿತಾವಧಿಯು ಬೇರೆ ರಾಷ್ಟ್ರಗಳ ಸರಾಸರಿ ಜೀವಿತಾವಧಿಗಂತ ಸುಮಾರು ಎಂಟೂವರೆ ಪಟ್ಟು ಹೆಚ್ಚಿದೆ ಎನ್ನಲಾಗಿದೆ.
ಇದನ್ನೂ ಓದಿ: ಕೆನಡಾದ ವಸತಿ ಶಾಲೆ ಆವರಣದಲ್ಲಿ 600 ಮಕ್ಕಳ ಮೃತದೇಹ ಪತ್ತೆ; ಇದು ಸಾಂಸ್ಕೃತಿಕ ಹತ್ಯಾಕಾಂಡದ ಭೀಕರತೆ
ಇಷ್ಟೇ ಅಲ್ಲದೇ ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲೂ ಬೇರೆ ರಾಷ್ಟ್ರಗಳಿಗಿಂತ 15ರಿಂದ 18ರಷ್ಟು ಹೆಚ್ಚು ಪಟ್ಟು ಅಮೆರಿಕದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೋವಿಡ್ ಕೂಡಾ ಅಮೆರಿಕದಲ್ಲಿನ ಶ್ವೇತವರ್ಣೀಯರಿಗಿಂತ ಹಿಸ್ಪ್ಯಾನಿಕ್ ಮತ್ತು ಕಪ್ಪು ವರ್ಣೀಯರಿಗೆ ಹೆಚ್ಚು ಬಾಧಿಸಿದೆ ಎಂದು ವರದಿ ಸ್ಪಷ್ಟಪಡಿಸಿದ್ದು, ಅಮೆರಿಕದಲ್ಲಿ ಈವರೆಗೆ ಸುಮಾರು 6 ಲಕ್ಷ ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ ಎಂದು ಜಾನ್ ಹಾಫ್ಕಿನ್ಸ್ ವಿವಿ ಮಾಹಿತಿ ನೀಡಿದೆ.