ವಾಷಿಂಗ್ಟನ್ : ಡ್ರ್ಯಾಗನ್ ರಾಷ್ಟ್ರದ ವಿರುದ್ಧ ಯುಎಸ್ ಸಮರ ಮುಂದುವರಿಸಿದ್ದು, ಚೀನಾ ಅಧಿಕಾರಿಗಳಿಗೆ ಯುಎಸ್ ವೀಸಾ ನಿರ್ಬಂಧ ವಿಧಿಸಿದೆ.
ಚೀನಾ ಕಮ್ಯುನಿಸ್ಟ್ ಪಕ್ಷದ ಅಧಿಕಾರಿಗಳಿಗೆ ಹಾಗೂ ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್ಮೆಂಟ್ಗೆ ಸಂಬಂಧಿಸಿದ ಪ್ರಚಾರಗಳಲ್ಲಿ ಭಾಗವಹಿಸುವವರಿಗೆ ಈ ನಿರ್ಬಂಧಗಳು ಅನ್ವಯವಾಗುತ್ತವೆ ಎಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದರು.
ಕಮ್ಯುನಿಸ್ಟ್ ಪಕ್ಷವು ಕಳ್ಳತನ, ದೈಹಿಕ ಹಿಂಸೆ, ಖಾಸಗಿ ಮಾಹಿತಿ ಬಿಡುಗಡೆ, ಗೂಢಚರ್ಯೆ, ದೇಶೀಯ ರಾಜಕೀಯ ವ್ಯವಹಾರಗಳಲ್ಲಿ ದುರುದ್ದೇಶಪೂರಿತ ಹಸ್ತಕ್ಷೇಪದಲ್ಲಿ ತೊಡಗಿದೆ ಅಂತಾ ಪೊಂಪಿಯೋ ಆರೋಪಿಸಿದ್ದಾರೆ. ಮಾನವಹಕ್ಕುಗಳಿಗೆ ಸಂಬಂಧಿಸಿತ ವಿವಾದಗಳು, ಕೋವಿಡ್, ವ್ಯಾಪಾರ, ತಂತ್ರಜ್ಞಾನ, ತೈವಾನ್ ಮತ್ತು ಇತರ ಹಲವು ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಚೀನಾ ವಿರುದ್ಧ ನಾವು ತೆಗೆದುಕೊಂಡಿರುವ ದಂಡನಾತ್ಮಕ ನಿರ್ಧಾರಗಳಿವು. ಇದೇ ವೇಳೆ ಅಂತಾರಾಷ್ಟ್ರೀಯ ಕ್ರಮಗಳನ್ನು ಉಲ್ಲಂಘಿಸಿದವರನ್ನು ಅಮೆರಿಕಗೆ ಸ್ವಾಗತಿಸುವುದಿಲ್ಲ ಎಂದು ಪೊಂಪಿಯೋ ಸ್ಪಷ್ಟ ಪಡಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಚೀನಾ ಸಾರ್ವಜನಿಕರಿಗೆ ಬೆದರಿಕೆಯೊಡ್ಡುತ್ತಿದೆ. ಜತೆಗೆ ಮಾರ್ಕ್ಸ್, ಲೆನಿನ್ ಸಿದ್ಧಾಂತವನ್ನು ವಿಶ್ವದಾದ್ಯಂತ ಹರಡಲು ಪ್ರಯತ್ನಿಸುತ್ತಿದೆ ಎಂದು ಪೊಂಪಿಯೋ ಆರೋಪಿಸಿದರು.