ವಾಷಿಂಗ್ಟನ್ (ಯುಎಸ್): ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ತರಂಗದ ವಿರುದ್ಧದ ಹೋರಾಟದಲ್ಲಿ ಅಮೆರಿಕ ಕಾಂಗ್ರೆಸ್(ಸಂಸತ್ತು)ನ ಜನಪ್ರತಿನಿಧಿಗಳ ಸಭೆ ಭಾರತಕ್ಕೆ ಬೆಂಬಲ ಸೂಚಿಸಿದೆ. ಭಾರತಕ್ಕೆ ಕೋವಿಡ್ ಸಹಾಯವನ್ನು ತುರ್ತಾಗಿ ನೀಡುವಂತೆ ಅದು ಬೈಡನ್ ಆಡಳಿತವನ್ನು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದೆ.
41 ಸಹ-ಪ್ರಾಯೋಜಕರನ್ನು ಹೊಂದಿದ್ದ ಸಂಸತ್ ಸದಸ್ಯರಾದ ಬ್ರಾಡ್ ಶೆರ್ಮನ್ ಮತ್ತು ಸ್ಟೀವ್ ಚಬೊಟ್ ಅವರ ಉಭಯಪಕ್ಷೀಯ ನಿರ್ಣಯ ಇದಾಗಿತ್ತು. ಕೋವಿಡ್ ಪ್ರಕರಣಗಳಲ್ಲಿ ಅಮೆರಿಕ ವಿಪರೀತ ಏರಿಕೆಯ ಮಧ್ಯದಲ್ಲಿದ್ದಾಗ, ಸರ್ಕಾರದ ಕೋರಿಕೆಗೆ ಪ್ರತಿಕ್ರಿಯೆಯಾಗಿ ಭಾರತವು ಹಲವು ಚಿಕಿತ್ಸಕಗಳ ಮೇಲಿನ ರಫ್ತು ನಿಷೇಧವನ್ನು ತೆಗೆದುಹಾಕಿತ್ತು.
ಭಾರತದ ಔಷಧೀಯ ಉದ್ಯಮವು ಸಾಂಕ್ರಾಮಿಕ ರೋಗಕ್ಕೆ ಜಾಗತಿಕ ಪರಿಹಾರದ ಒಂದು ಪ್ರಮುಖ ಭಾಗವಾಗಿದೆ. ವಿಶೇಷವಾಗಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಬಹುಪಾಲು ಮತ್ತು 93 ದೇಶಗಳಿಗೆ 66.36 ಮಿಲಿಯನ್ ಡೋಸ್ ಕೋವಿಡ್ ಲಸಿಕೆಯನ್ನು ರಫ್ತು ಮಾಡಿದ ವಿಶ್ವದ ಅತಿದೊಡ್ಡ ಕೋವಿಡ್ ಲಸಿಕೆಗಳ ಉತ್ಪಾದಕ ದೇಶ ಭಾರತ. ಹೀಗಾಗಿ, ಜಾಗತಿಕ ಲಸಿಕೆ ತಯಾರಿಕೆಯ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣವನ್ನು ಭಾರತ ಹೊಂದಿದೆ.
ಇದನ್ನೂ ಓದಿ: ಭಾರತಕ್ಕೆ 41 ಮಿಲಿಯನ್ ಡಾಲರ್ ಹೆಚ್ಚುವರಿ ಹಣಕಾಸು ನೆರವು ನೀಡಿದ ಅಮೆರಿಕ
ಕೊರೊನಾ ಹರಡುವುದನ್ನು ತಡೆಯಲು ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಈ ನಿರ್ಣಯವು ಭಾರತದ ಪರವಾಗಿದೆ. ವೈರಸ್ ಮುಂದುವರಿದಲ್ಲೆಲ್ಲಾ ಅದನ್ನು ತಗ್ಗಿಸಲು ಯುಎಸ್ ಪ್ರಪಂಚದಾದ್ಯಂತ ನಮ್ಮ ಪಾಲುದಾರರೊಂದಿಗೆ ಕೆಲಸ ಮಾಡಬೇಕು ಎಂದು ಬ್ರಾಡ್ ಶೆರ್ಮನ್ ಸಲಹೆ ನೀಡಿದರು.
ಈ ನಿರ್ಣಯದ ಮೊದಲು, ಯುಎಸ್ ಕಾಂಗ್ರೆಸ್‌ನ 150 ಕ್ಕೂ ಹೆಚ್ಚು ಸದಸ್ಯರು ಭಾರತವನ್ನು ಬೆಂಬಲಿಸಿ ಹೇಳಿಕೆಗಳು, ಪತ್ರಗಳು ಮತ್ತು ಟ್ವೀಟ್‌ಗಳನ್ನು ಬಿಡುಗಡೆ ಮಾಡಿದ್ದಾರೆ.