ಮಿನ್ನಿಯಾಪೋಲಿಸ್( ಅಮೆರಿಕ) : ಕೋವಿಡ್-19 ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿದೆ. ಕೊರೊನಾ ಅರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುವುದರ ಜೊತೆಗೆ ಕೋಟ್ಯಂತರ ಮಂದಿಯ ಜೀವ ಬಲಿಪಡೆದಿದೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ ಡೆಲ್ಟಾ ರೂಪಾಂತರದ ಅಬ್ಬರ ಅಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೂ ಸಹ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೊಸ ಮೈಲಿಗಲ್ಲನ್ನು ತಲುಪಿದ್ದು, ಯುನೈಟೆಡ್ ಸ್ಟೇಟ್ಸ್ನಲ್ಲಿ ಬರೋಬ್ಬರಿ 7,00,000 ಕ್ಕೂ ಅಧಿಕ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಮೆರಿಕದಲ್ಲಿ ಕಳೆದ ಸುಮಾರು ಆರು ತಿಂಗಳಿನಿಂದ ಲಸಿಕೆ ಲಭ್ಯವಿವೆ. ಆದರೂ ಅಂದಾಜು 70 ಮಿಲಿಯನ್ ಅರ್ಹರಿಗೆ ಇನ್ನೂ ಕೋವಿಡ್ ಲಸಿಕೆ ಹಾಕಿಲ್ಲ. ಒಂದು ವೇಳೆ ಲಸಿಕೆ ಪಡೆಯುವಲ್ಲಿ ಹಿಂಡೇಟು ಹಾಕಿದರೆ ನಿಮ್ಮ ಜೀವಕ್ಕೆ ಅಪಾಯ ಎಂದು ಯುಎಫ್ ಹೆಲ್ತ್ ಜಾಕ್ಸನ್ವಿಲ್ಲೆ ಮ್ಯಾನೇಜರ್ ಡೆಬಿ ಡೆಲಾಪಾಜ್ ಹೇಳಿದ್ದಾರೆ.
ಇನ್ನು ದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ದಿನದಿಂದ ದಿನಕ್ಕೆ ಹೊಸ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಲಸಿಕೆ ಪಡೆಯುವುದು, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿರುವುದರಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ.
ಸೆಪ್ಟೆಂಬರ್ ಆರಂಭದಲ್ಲಿ 93,000 ಕ್ಕಿಂತಲೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇದೀಗ ಗುಣಮುಖರ ಸಂಖ್ಯೆಯಲ್ಲಿ ಸಹ ಏರಿಕೆ ಕಂಡುಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪ್ರಮಾಣ ಸಹ ಕಡಿಮೆಯಾಗಿದೆ.