ವಾಷಿಂಗ್ಟನ್ : ಇಡೀ ಜಗತ್ತಿನ ಗಮನ ಸೆಳೆದಿರುವ ಯುಎಸ್ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ಮಧ್ಯೆಯೇ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರದ ಚುನಾವಣಾ ಪ್ರಕ್ರಿಯೆಯ ವಿಶ್ವಾಸವನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ.
ಚುನಾವಣಾ ಫಲಿತಾಂಶದಲ್ಲಿ ಜೋ ಬೈಡೆನ್ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆ, ಸೋಲಿನ ಭೀತಿಯಿಂದ ಟ್ರಂಪ್ ಪುರಾವೆ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಮತ ಎಣಿಕೆ ನಿಲ್ಲಿಸುವಂತೆ ಟ್ರಂಪ್ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ವಜಾಗೊಳಿಸಿದೆ. ಈ ನಡುವೆ, ಮತ ಎಣಿಕೆ ಪ್ರಕ್ರಿಯೆ ವಿಶ್ವಾಸಾರ್ಹವಾಗಿದೆ. ಎಲ್ಲಾ ಮತಗಳ ಎಣಿಕೆ ಮುಗಿಯುವವರೆಗೆ ತಾಳ್ಮೆ ವಹಿಸುವಂತೆ ಅಮೆರಿಕನ್ನರಿಗೆ ಬೈಡೆನ್ ಮನವಿ ಮಾಡಿದ್ದಾರೆ.
ಟ್ರಂಪ್ ವಿಜಯದ ಹಾದಿ ತುಂಬಾ ಕಠಿಣವಾಗಿದೆ. ಆದ್ದರಿಂದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸರಣಿ ಟ್ವೀಟ್ಗಳ ಮೂಲಕ ಆರೋಪಿಸುತ್ತಿದ್ದಾರೆ. ಹೀಗಾಗಿ, ಚುನಾವಣಾ ದಿನಾಂಕದ ಮೊದಲು ಮತ್ತು ನಂತರ ಸಲ್ಲಿಸಲಾದ ಬ್ಯಾಲೆಟ್ ಪೇಪರ್ಗಳ ಎಣಿಕೆಯನ್ನು ನಿಲ್ಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
2016ರಲ್ಲಿ ಕೂಡ ಟ್ರಂಪ್ ಈ ರೀತಿಯ ಆರೋಪಗಳನ್ನು ಮಾಡಿದ್ದರು. ಬಳಿಕ ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ, ಈ ಬಾರಿ ಅವರು ಚುನಾವಣಾ ಪ್ರಕ್ರಿಯೆಯ ವಿರುದ್ಧ ಆರೋಪಗಳನ್ನು ಮಾಡುತ್ತಿರುವುದು, ಒಬ್ಬ ಅಭ್ಯರ್ಥಿಯಾಗಿ ಅಲ್ಲ. ಬದಲಾಗಿ ಯುಎಸ್ ಅಧ್ಯಕ್ಷರಾಗಿ ಎನ್ನುವುದು ಇಲ್ಲಿ ಗಮನಾರ್ಹ ವಿಷಯ.
ಮಿಚಿಗನ್ ಮತ್ತು ವಿಸ್ಕಾನ್ಸಿನ್‌ನಲ್ಲಿ ಬೈಡೆನ್ ಅವರ ವಿಜಯ ಅವರನ್ನು ಉನ್ನತ ಮಟ್ಟಕ್ಕೆ ತಂದು ನಿಲ್ಲಿಸಿದೆ. ಆದರೂ, ಟ್ರಂಪ್ ತನ್ನ ಆರೋಪಗಳನ್ನು ನಿಲ್ಲಿಸಿಲ್ಲ.
ಇನ್ನೂ ಮತ ಎಣಿಕೆ ಮುಗಿಯಲು ಹಲವು ದಿನಗಳು ಬೇಕಾಗಬಹುದು, ಬಳಿಕ ವಿಜೇತರು ಯಾರೆಂಬುವುದು ಸ್ಪಷ್ಟವಾಗಿ ಗೊತ್ತಾಗಲಿದೆ. ಬೈಡೆನ್ ಈಗಾಗಲೇ ಮಿಚಿಗನ್ ಮತ್ತು ವಿಸ್ಕಾನ್ಸಿನ್ ಗೆದ್ದಿದ್ದಾರೆ. ಜಾರ್ಜಿಯಾ, ಪೆನ್ಸಿಲ್ವೇನಿಯಾ, ನೆವಾಡಾ ಮತ್ತು ಉತ್ತರ ಕೆರೊಲಿನಾದಲ್ಲಿ ಇನ್ನೂ ಮತ ಎಣಿಕೆ ನಡೆಯುತ್ತಿದೆ.
ಅರಿಝೋನಾದಲ್ಲಿ ಅಧ್ಯಕ್ಷರು ಗೆಲ್ಲುತ್ತಾರೆ ಎಂದು ಟ್ರಂಪ್ ಅಭಿಯಾನ ತಂಡ ವಿಶ್ವಾಸ ವ್ಯಕ್ತಪಡಿಸಿದೆ. ಅರಿಝೋನಾದ ಪ್ರಮುಖ ಸ್ಥಳವಾದ ಮಾರಿಕೊಪಾ ಕೌಂಟಿ ಸೇರಿದಂತೆ ಹಲವೆಡೆ ಮತ ಎಣಿಕೆ ನಡೆಯುತ್ತಿದೆ. ಆದರೆ, ಅಸೋಸಿಯೇಟೆಡ್ ಪ್ರೆಸ್, ಅರಿಝೋನಾದಲ್ಲಿ ಬೈಡೆನ್ ಜಯ ಸಾಧಿಸುತ್ತಾರೆ ಎಂದಿದೆ.