ವಾಷಿಂಗ್ಟನ್, ಅಮೆರಿಕ : ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್ಗೆ ಹೆಚ್ಚುವರಿ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳಿಗೆ 200 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ನೀಡಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅನುಮೋದನೆ ನೀಡಿದ್ದಾರೆ ಎಂದು ಶ್ವೇತಭವನ ಮಾಹಿತಿ ನೀಡಿದೆ.
ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನಾಲ್ಕನೇ ಬಾರಿಗೆ ಅಮೆರಿಕ ಉಕ್ರೇನ್ಗೆ ಸಹಕಾರ ನೀಡುತ್ತಿದ್ದು, ಜನವರಿ 2021ರಿಂದ ಈವರೆಗೆ 1.2 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಭದ್ರತಾ ಸಹಾಯವನ್ನಾಗಿ ನೀಡಲಾಗಿದೆ ಎಂದು ಶ್ವೇತಭವನ ಟ್ವೀಟ್ನಲ್ಲಿ ತಿಳಿಸಿದೆ. ಇದೇ ರೀತಿಯಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಟ್ವೀಟ್ ಮಾಡಿದ್ದಾರೆ
ರಷ್ಯಾದ ಅಪ್ರಚೋದಿತ ದಾಳಿಯನ್ನು ಎದುರಿಸುತ್ತಿರುವ ಉಕ್ರೇನ್‌ನ ಸೈನಿಕರಿಗೆ ರಕ್ಷಾ ಕವಚಗಳು, ವಿಮಾನ ಹೊಡೆದುರಳಿಸಬಲ್ಲ ಸಾಧನಗಳು ಮತ್ತು ಹಲವು ಶಸ್ತ್ರಾಸ್ತ್ರಗಳಿಗಾಗಿ ತಕ್ಷಣದ ನೆರವು ನೀಡಲಾಗುತ್ತಿದೆ ಎಂದು ಅಮೆರಿಕನ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.
ಇದನ್ನೂ ಓದಿ: ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ವಾಯುಪಡೆ ವಿಮಾನ ಪತನ : ತೈವಾನ್ನಿಂದ ದೃಢ
ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದಲ್ಲಿ ಈಗಾಗಲೇ ಸಾವಿರಾರು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಕೀವ್ ಪ್ರದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಸ್ಥಳಾಂತರಿಸುತ್ತಿದ್ದ ಬೆಂಗಾವಲು ಪಡೆಗಳ ಮೇಲೆ ರಷ್ಯಾದ ಪಡೆಗಳು ಗುಂಡು ಹಾರಿಸಿದ್ದು, ಒಂದು ಮಗು ಸೇರಿ ಏಳು ಜನರು ಮೃತಪಟ್ಟಿದ್ದಾರೆ ಎಂದು ಶನಿವಾರ ಉಕ್ರೇನ್ ಹೇಳಿದೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮೀರ್ ಝೆಲೆನ್ಸ್ಕಿ ಅವರ ಸಹಾಯಕ ಮೈಖೈಲೊ ಪೊಡೊಲ್ಯಾಕ್ ಅವರು ರಷ್ಯಾದ ನಿಯೋಗದೊಂದಿಗೆ ಮಾತುಕತೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಿರಂತರವಾಗಿ ನಡೆಸುತ್ತಿದ್ದು, ನಾಗರಿಕರ ಸ್ಥಳಾಂತರಕ್ಕೆ ಮಾನವೀಯ ಕಾರಿಡಾರ್ಗಳ ರಚನೆಗೆ ಮಾತುಕತೆಯಲ್ಲಿ ಆದ್ಯತೆ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.