ವಾಷಿಂಗ್ಟನ್: ದಿನವೊಂದರಲ್ಲಿ ತನಗಿಂತ ಹೆಚ್ಚು ಕೋವಿಡ್ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿರುವ ಭಾರತಕ್ಕೆ ಪ್ರಯಾಣ ಮಾಡದಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.
ಭಾರತದಲ್ಲಿ ಪ್ರಸ್ತುತ ಕೊರೊನಾ ಪರಿಸ್ಥಿತಿಯ ಕಾರಣದಿಂದಾಗಿ ಸಂಪೂರ್ಣ ಲಸಿಕೆ ಅಂದರೆ ಕೊರೊನಾ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದ ಮೇಲೆಯೇ ಭಾರತಕ್ಕೆ ಪ್ರಯಾಣ ಬೆಳೆಸಿ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಡಿಸೀಸ್ ಕಂಟ್ರೋಲ್ & ಪ್ರಿವೆನ್ಷನ್ - ಸಿಡಿಸಿ) ತನ್ನ ನಾಗರಿಕರಿಗೆ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹರಡುತ್ತಿದೆ ಮಹಾಮಾರಿ: ಎಸ್ಐಟಿ ತಂಡಕ್ಕೆ ವಕ್ಕರಿಸಿದ ಕೊರೊನಾ!
ಲಸಿಕೆ ಹಾಕಿಸಿಕೊಂಡ ಮೇಲೂ ಸಹ ರೂಪಾಂತರಿ ಕೊರೊನಾ ಅಂಟಿಸಿಕೊಳ್ಳುವ ಹಾಗೂ ಹರಡುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿರುವ ಸಿಡಿಸಿ, ಲಸಿಕೆ ಪಡೆದ ಮೇಲೆ ಮಾಸ್ಕ್, ಕೈ ತೊಳೆಯುವುದು, ಆರು ಅಡಿ ದೈಹಿಕ ಅಂತರದಂತಹ ನಿಯಮ ಪಾಲಿಸಿ, ಜನಸಂದಣಿಯನ್ನು ತಪ್ಪಿಸಿ ಪ್ರಯಾಣ ಬೆಳೆಸಿ ಎಂದು ಸಲಹೆ ನೀಡಿದೆ.
ಸಂಪೂರ್ಣವಾಗಿ ವ್ಯಾಕ್ಸಿನ್ ಪಡೆದವರು ಯುಎಸ್ನಿಂದ ಹೊರಡುವ ಮುನ್ನ ಕೋವಿಡ್ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ. ಹಾಗೂ ಅಮೆರಿಕಕ್ಕೆ ಮರಳಿದ ಮೇಲೂ ಕ್ವಾರಂಟೈನ್ಗೆ ಒಳಪಡಬೇಕಾಗಿಲ್ಲ ಎಂದು ಸಿಡಿಸಿ ಸ್ಪಷ್ಟಪಡಿಸಿದೆ.