ನವದೆಹಲಿ: ರಷ್ಯಾ ಹಾಗೂ ಉಕ್ರೇನ್ ಗಡಿಯಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಉಕ್ರೇನ್ ಮೇಲೆ ಮಾಸ್ಕೋ ಆಕ್ರಮಣ ನಡೆಸುವ ಬೆದರಿಕೆಯೊಡ್ಡಿದೆ. ಈ ಹಿನ್ನೆಲೆ ರಷ್ಯಾ ಮತ್ತು ಅಮೆರಿಕ ಎರಡೂ ರಾಷ್ಟ್ರಕ್ಕೂ ಬೆಂಬಲ ನೀಡದೇ ಭಾರತ (ತಟಸ್ಥ ನೀತಿ) ರಾಜತಾಂತ್ರಿಕ ನಿಲುವನ್ನು ಕಾಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನೂರಾರು ವರ್ಷಗಳಿಂದ ಸಾಂಸ್ಕೃತಿಕ, ಭಾಷಾ ಮತ್ತು ಕೌಟುಂಬಿಕ ಸಂಬಂಧಗಳನ್ನು ಹಂಚಿಕೊಂಡು ಬಂದಿವೆ. ರಷ್ಯಾದ ಬಳಿಕ, ಉಕ್ರೇನ್ ಎರಡನೇ ಅತ್ಯಂತ ಶಕ್ತಿಶಾಲಿ ಸೋವಿಯತ್ ಗಣರಾಜ್ಯವಾಗಿತ್ತು. ಸೋವಿಯತ್ ಒಕ್ಕೂಟದಿಂದ ಉಕ್ರೇನ್ ಬೇರ್ಪಟ್ಟಾಗಿನಿಂದ ಉಕ್ರೇನ್ನಲ್ಲಿ ತನ್ನ ಅಧಿಕಾರ ಸ್ಥಾಪಿಸಲು ರಷ್ಯಾ ಪ್ರಯತ್ನಿಸುತ್ತಲೇ ಬಂದಿದೆ.
ಅದರಂತೆ 2014ರಲ್ಲಿ ಯುಕ್ರೇನ್‌ನಿಂದ ಕ್ರಿಮಿಯಾ ಪ್ರದೇಶವನ್ನು ರಷ್ಯಾ ವಶಪಡಿಸಿಕೊಂಡಿತು. ಎರಡನೇ ಮಹಾಯುದ್ಧದ ನಂತರ ಯುರೋಪಿಯನ್ ದೇಶವೊಂದು ಮತ್ತೊಂದು ದೇಶದ ಪ್ರದೇಶ ಸ್ವಾಧೀನಪಡಿಸಿಕೊಂಡಿದ್ದು ಇದೇ ಮೊದಲಾಗಿತ್ತು.
ಇತ್ತ ಉಕ್ರೇನ್ ಅನ್ನು ನ್ಯಾಟೋ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್)ಗೆ ಸೇರಿಸಿಕೊಳ್ಳಲು ಅಮೆರಿಕ ಯತ್ನಿಸುತ್ತಿದೆ. ಇದನ್ನು ವಿರೋಧಿಸಿರುವ ರಷ್ಯಾ ನ್ಯಾಟೋಗೆ ಉಕ್ರೇನ್ ಸೇರಿಸಿಕೊಳ್ಳದಂತೆ ಭರವಸೆ ನೀಡುವಂತೆ ಅಮೆರಿಕ ಬಳಿ ಕೇಳಿದೆ. ಆದರೆ, ಈ ಮನವಿಯನ್ನು ಜೋ ಬೈಡನ್ ತಿರಸ್ಕರಿಸಿದ್ದಾರೆ. ಹೀಗಾಗಿ ಉಕ್ರೇನ್ ಮೇಲೆ ಯುದ್ಧ ಸಾರಿ ಅಲ್ಲಿನ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಸಿದ್ಧತೆ ನಡೆಸುತ್ತಿದೆ.
ಉಕ್ರೇನ್ ಬೆಂಬಲಕ್ಕೆ ಅಮೆರಿಕ, ಜಪಾನ್, ಹಂಗೇರಿ, ಬಲ್ಗೇರಿಯಾ, ಫ್ರಾನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳು ನಿಂತಿವೆ. ಆದರೆ, ಭಾರತ ರಷ್ಯಾ ಮತ್ತು ಯುನೈಟೆಡ್ ಅಮೆರಿಕದೊಂದಿಗೆ ನವದೆಹಲಿಯ ಸಮೀಕರಣ ಒಪ್ಪಂದ ಮಾಡಿಕೊಂಡಿರುವುದರಿಂದ ತಟಸ್ಥವಾಗಿ ಉಳಿಯುವ ಸಾಧ್ಯತೆಯಿದೆ.
ಈ ಮೂಲಕ ರಷ್ಯಾವನ್ನು ಅಸಮಾಧಾನಗೊಳಿಸುವುದಿಲ್ಲ ಅಥವಾ ಅಮೆರಿಕವನ್ನು ನಿರಾಶೆಗೊಳಿಸುವುದಿಲ್ಲ. 2014 ರಲ್ಲಿ ರಷ್ಯಾ ಕ್ರಿಮಿಯಾವನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಾಗ ನವದೆಹಲಿಯು ಈ ಕ್ರಮವನ್ನು ಟೀಕಿಸಲಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಸೂಕ್ತ ಎಂದು ಜೆಎನ್‌ಯು ಸ್ಕೂಲ್ ಆಫ್ ರಷ್ಯನ್ ಮತ್ತು ಸೆಂಟ್ರಲ್ ಏಷ್ಯನ್ ಸ್ಟಡೀಸ್ನ ಡಾ. ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ