ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವನ್ನು ಬಯಸಿ ಮಾಡಿದ ಟ್ವೀಟ್‌ಗಳನ್ನು ಪೂರ್ವಭಾವಿಯಾಗಿ ತೆಗೆದುಹಾಕುವುದಾಗಿ ಟ್ವಿಟ್ಟರ್ ಸ್ಪಷ್ಟಪಡಿಸಿದೆ. ಅಲ್ಲದೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಂತಹ ಕಿಡಿಗೇಡಿಗಳ ಖಾತೆಗಳನ್ನು 'ರೀಡ್-ಓನ್ಲಿ' ಮೋಡ್‌ಗೆ ಹಾಕುತ್ತದೆ.
ತಾನು ಮತ್ತು ತನ್ನ ಪತ್ನಿ ಮೆಲಾನಿಯಾ ಟ್ರಂಪ್ ಅವರು ಕೋವಿಡ್ -19 ಸೋಂಕಿಗೆ ತುತ್ತಾಗಿದ್ದೇವೆ ಎಂದು ಟ್ರಂಪ್ ಶುಕ್ರವಾರ ಘೋಷಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡುತ್ತಿರುವ ಹಲವು ಜನರು, ಮಾರಣಾಂತಿಕ ಕಾಯಿಲೆಗೆ ಟ್ರಂಪ್ ಪ್ರಾಣ ಕಳೆದುಕೊಳ್ಳಬೇಕು ಎನ್ನುತ್ತಿದ್ದಾರೆ.
ಟ್ವಿಟ್ಟರ್ ವೇದಿಕೆಯಲ್ಲಿ ಟ್ರಂಪ್ ಸಾವಿನ ಬಗ್ಗೆ ಬಹಿರಂಗವಾಗಿ ಆಶಿಸಲು ಬಳಕೆದಾರರಿಗೆ ಅವಕಾಶವಿಲ್ಲ. ಹಾಗೆ ಮಾಡುವ ಟ್ವೀಟ್‌ಗಳನ್ನು ತೆಗೆದುಹಾಕಬೇಕಾಗುತ್ತದೆ ಎಂದು ಟ್ವಿಟ್ಟರ್ ತಿಳಿಸಿದೆ.
ಟ್ವಿಟ್ಟರ್ ತನ್ನ 'ನಿಂದನೀಯ ನಡವಳಿಕೆ' ನಿಯಮ, 'ಒಬ್ಬ ವ್ಯಕ್ತಿ ಅಥವಾ ಜನರ, ಗುಂಪಿನ ವಿರುದ್ಧ ಸಾವಿನ ಬಯಕೆ, ಗಂಭೀರ ದೈಹಿಕ ಹಾನಿ ಅಥವಾ ಮಾರಕ ಕಾಯಿಲೆಗಳನ್ನು ಬಯಸುವ, ಆಶಿಸುವ ಅಥವಾ ವ್ಯಕ್ತಪಡಿಸುವ ವಿಷಯವನ್ನು ನಾವು ಸಹಿಸುವುದಿಲ್ಲ' ಎಂದು ಹೇಳುತ್ತದೆ.