ವಾಷಿಂಗ್ಟನ್: ಅಮೆರಿಕಾದಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕ್ ಪಕ್ಷಗಳ ನಾಯಕರಲ್ಲಿ ಸಮರ ಶುರುವಾಗಿದೆ. ಕೆಲ ತಿಂಗಳ ಹಿಂದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಯಡವಟ್ಟಿನಿಂದ ಈಗ ಟ್ರಂಪ್ ವಾಗ್ದಂಡನೆಗೆ ಎಲ್ಲೆಡೆ ಒತ್ತಾಯ ಶುರುವಾಗಿದೆ.
ಕಳೆದ ಜುಲೈ 25 ರಂದು ಉಕ್ರೇನ್ ಆಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿಗೆ ಕರೆ ಮಾಡಿದ್ದ ಟ್ರಂಪ್, ಅಮೆರಿಕಾ ಡೆಮಾಕ್ರಟಿಕ್ ಪಕ್ಷದ ನಾಯಕ ಜೋ ಬಿಡೆನ್ ಮತ್ತು ಅವರ ಮಗ ಹಂಟರ್ ಬಿಡೆನ್, ಉಕ್ರೇನ್ನಲ್ಲಿ ಪಾಲುದಾರರಾಗಿರುವ ಉದ್ಯಮದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಗಮನಹರಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕಾಗಿಯೇ ಡೆಮಾಕ್ರಟಿಕ್ ಪಕ್ಷ, ರಿಪಬ್ಲಿಕ್ ಪಕ್ಷದ ಟ್ರಂಪ್ ವಾಗ್ದಂಡನೆಗೆ ಒತ್ತಾಯಿಸಿದೆ.
ಅಮೆರಿಕಾ ಅಧ್ಯಕ್ಷ ಟ್ರಂಪ್ ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆದುಕೊಂಡಿದ್ದು ಅವರ ವಿರುದ್ಧ ವಾಗ್ದಂಡನೆ ಮಂಡಿಸಬೇಕು ಎಂದು ಜೋ ಬಿಡೆನ್ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಈ ವಿಚಾರವಾಗಿ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸಾರ್ವಜನಿಕರ ವಿಚಾರಣೆ ಆರಂಭಗೊಂಡಿದೆ. ಡೆಮಾಕ್ರಟಿಕ್ ಬೆಂಬಲಿಗರು ವಾಗ್ದಂಡನೆಗೆ ದುಂಬಾಲು ಬಿದ್ದಿದ್ದು, ವಿಚಾರಣೆ ಬಳಿಕ ಏನಾಗುತ್ತದೆ ನೋಡಬೇಕಿದೆ.
2020 ಸಮೀಪಿಸುತ್ತಿದ್ದಂತೆ ಮುಂದಿನ ಚುನಾವಣೆಗಾಗಿ ಸ್ಟ್ರಾಟೆಜಿ ರೂಪುಗೊಳ್ಳುತ್ತಿದೆ. ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಟ್ರಂಪ್ ದೋಷಾರೋಪಣೆ ಮತದಾರರನ್ನು ಸೆಳೆಯಲು ಸಿಕ್ಕ ಅವಕಾಶದಂತಾಗಿದೆ. ಈಗಾಗಲೇ ನಡೆದ ಸಮೀಕ್ಷೆಯ ಮಾಹಿತಿ ಪ್ರಕಾರ ಹೆಚ್ಚಿನ ಜನರು ಟ್ರಂಪ್ ದೋಷಾರೋಪಣೆಯನ್ನು ಬೆಂಬಲಿಸುತ್ತಿದ್ದಾರೆ. ಆದರೆ ಮುಂದೆ ನಡೆಯುವ ವಿಚಾರಣೆ ಜನರ ಮನಸ್ಥಿತಿಯನ್ನು ಬದಲಾಯಿಸುವ ಸಾಧ್ಯತೆ ಇದೆ.
ಈ ಸಂಬಂಧ ಟೆಲಿವಿಷನ್ ವಿಚಾರಣೆ ಬುಧವಾರದಿಂದ ಪ್ರಾರಂಭವಾಗಲಿದೆ. ಇದು ಶುಕ್ರವಾರದವರೆಗೂ ಮುಂದುವರಿಯಲಿದೆ. ಈ ವೇಳೆ ಮೂರು ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯುತ್ತದೆ. ತಮ್ಮ ಕಚೇರಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಟ್ರಂಪ್ ಬಗ್ಗೆ ಈ ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯಲಿದೆ.
ಜೋ ಬಿಡೆನ್ ಉಪಾಧ್ಯಕ್ಷರಾಗಿದ್ದಾಗ ಉಕ್ರೇನಿಯನ್ ನೈಸರ್ಗಿಕ ಅನಿಲ ಕಂಪನಿಯೊಂದರ ಮಂಡಳಿಗೆ ಅವರ ಪುತ್ರ ಹಂಟರ್ ಬಿಡೆನ್ ನೇಮಕವಾಗಿದ್ದರು. ಹಂಟರ್ ಅವರನ್ನು ಏಕೆ ಮತ್ತು ಹೇಗೆ ನೈಸರ್ಗಿಕ ಅನಿಲ ಕಂಪನಿಯೊಂದರ ಮಂಡಳಿಗೆ ನೇಮಿಸಲಾಯಿತು ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ಟ್ರಂಪ್ ಉಕ್ರೇನ್ ಆಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿಗೆ ಹೇಳಿದ್ದರು.
ಈ ಬಗ್ಗೆ ನಿಖರ ಮಾಹಿತಿಗಾಗಿ ಶ್ವೇತಭವನದ ನಿರ್ವಹಣೆ ಮತ್ತು ಬಜೆಟ್ ಕಚೇರಿಯ ಪ್ರಮುಖ ಅಧಿಕಾರಿಗಳು ಸಾಕ್ಷಿ ಹೇಳಲು ನಿರಾಕರಿಸಿದ್ದಾರೆ. ಕಳೆದ ವಾರ 13 ಸಾಕ್ಷಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ ಇದರಲ್ಲಿ ಇಬ್ಬರು ಮಾತ್ರ ವಿಚಾರಣೆಗೆ ಹಾಜರಿದ್ದರು.
ಆದರೆ ಇತರ ಸಾಕ್ಷಿಗಳಾಗಿರುವ ಶ್ವೇತಭವನದಲ್ಲಿ ಸೇವೆ ಸಲ್ಲಿಸಿದ ಮಾಜಿ ಮತ್ತು ಹಾಲಿ ಅಧಿಕಾರಿಗಳು, ಈಗಾಗಲೇ ಟ್ರಂಪ್ ಪ್ರಕರಣದ ಬಗ್ಗೆ ಸಾಕ್ಷಿ ನೀಡಿದ್ದಾರೆ. ಆ ಸಾಕ್ಷ್ಯಗಳ ಪ್ರತಿಗಳನ್ನು ಡೆಮಾಕ್ರಟಿಕ್ ಪಕ್ಷ ಬಿಡುಗಡೆ ಮಾಡಿದೆ.
ಟ್ರಂಪ್ ತಮ್ಮ ಕಚೇರಿಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷ ಆರೋಪಿಸಿದೆ. ಅಮೆರಿಕಾದ ಅನೇಕ ಅಧಿಕಾರಿಗಳಿಂದ ಪಡೆದ ಮಾಹಿತಿಯನ್ನು ಈ ವೇಳೆ ಉಲ್ಲೇಖಿಸಿದ್ದಾರೆ. ಇನ್ನೊಂದೆಡೆ ಇದು ವಾಗ್ದಂಡನೆಗೆ ಅರ್ಹ ಪ್ರಕರಣವೇ ಎಂಬ ಚರ್ಚೆಯೂ ಹಲವು ತಜ್ಞರಲ್ಲಿ ಚರ್ಚೆಯಾಗಿದೆ.
ಅಮೆರಿಕಾ ಸಂವಿಧಾನದ ಪ್ರಕಾರ, ದೇಶದ್ರೋಹ, ಲಂಚ ಅಥವಾ ಇತರ ಉನ್ನತ ಅಪರಾಧಗಳು ಮಾಡಿದ ಅಧ್ಯಕ್ಷರ ಮೇಲೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ದೋಷಾರೋಪಣೆ ಮಾಡಬಹುದು. ಆದರೆ ಈ ಪ್ರಕರಣದಲ್ಲಿ ಉನ್ನತ ಅಪರಾಧ ಯಾವುದು ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ ಅದನ್ನು ವ್ಯಾಖ್ಯಾನಿಸಲು ದೋಷಾರೋಪಣೆಯ ಲೇಖನಗಳನ್ನು ಸಿದ್ಧಪಡಿಸಲು ರಾಜಕಾರಣಿಗಳಿಗೆ ಹೇಳಲಾಗುತ್ತದೆ.
ಹೀಗೆ ಸಿದ್ಧಪಡಿಸಿದ ಲೇಖನಗಳು ಚಾರ್ಜ್‌ಶೀಟ್‌ಗೆ ಸಮನಾಗಿರುತ್ತದೆ. ಇದನ್ನು ಸಿದ್ಧಪಡಿಸಿದ ನಂತರ ಅದನ್ನು ಸೆನೆಟ್ಗೆ ಕಳುಹಿಸಲಾಗುತ್ತದೆ. ಅಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತದೆ. ಆದರೆ ಅಲ್ಲಿ ಅಪರಾಧ ಸಾಬೀತುಪಡಿಸಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ.
ಸದ್ಯ ಡೆಮಾಕ್ರೆಟ್ಗಳು ಇಲ್ಲಿನ ಸದನವನ್ನು ನಿಯಂತ್ರಿಸುವುದರಿಂದ, ಟ್ರಂಪ್ ಅವರ ಮೇಲೆ ದೋಷಾರೋಪ ಸಾಬೀತಾಗುವ ಸಾಧ್ಯತೆಯಿದೆ. ಆದರೆ ಇಲ್ಲಿನ ಸೆನೆಟ್, ರಿಪಬ್ಲಿಕನ್ ಬಹುಮತವನ್ನು ಹೊಂದಿರುವುದರಿಂದ ಟ್ರಂಪ್ ವಾಗ್ದಂಡನೆ ಸಾಧ್ಯತೆ ಕಡಿಮೆ.
ಟ್ರಂಪ್ ಈಗಾಗಲೇ ದೋಷಾರೋಪಣೆ ಪ್ರಕ್ರಿಯೆಯನ್ನು "ಮಾಟಗಾತಿ ಬೇಟೆ" ಎಂದು ಕರೆದಿದ್ದಾರೆ. ಟ್ವಿಟ್ಟರ್ನಲ್ಲಿ ತಮ್ಮನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ತಮ್ಮ ಬಳಗವನ್ನು ಒಟ್ಟುಗೂಡಿಸಿದ್ದಾರೆ. ಯುಎಸ್ ಕಾಂಗ್ರೆಸ್ಲ್ಲಿ ಟ್ರಂಪ್ ರಿಪಬ್ಲಿಕನ್ ಬೆಂಬಲಿಗರು ಬೆಂಬಲವಾಗಿ ನಿಂತಿದ್ದಾರೆ. ಝೆಲೆನ್ಸ್ಕಿಯೊಂದಿಗಿನ ಟ್ರಂಪ್ ಅವರ ಫೋನ್ ಕರೆ ಪರಿಪೂರ್ಣ ಅಲ್ಲ ಎಂದು ಅವರು ಹೇಳುವಾಗ, ಅಪರಾಧವು ದೋಷಾರೋಪಣೆ ಅರ್ಹವಾಗುವುದು ಕಷ್ಟಸಾಧ್ಯ.