ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಲ್ಕು ತಿಂಗಳ ಕಠಿಣ ಮಹಾಭಿಯೋಗವು ಅಂತಿಮ ಹಂತದಲ್ಲಿದೆ. ಅವರು ಬುಧವಾರ ಇದರಿಂದ ಖುಲಾಸೆಗೊಳ್ಳುವುದರಿಂದ, ಮಂಗಳವಾರ ತಮ್ಮ ಸ್ಟೇಟ್ ಆಫ್ ದಿ ಯೂನಿಯನ್ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವಾಗ ಮಹಾಭಿಯೋಗದ ಅಡಿಯಲ್ಲಿಯೇ ಇರುತ್ತಾರೆ.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಡೆಮೋಕ್ರಾಟ್ ಪ್ರಾಸಿಕ್ಯೂಟರ್ಗಳು ಸೋಮವಾರ ತಮ್ಮ ಪ್ರಕರಣವನ್ನು ಮುಕ್ತಾಯಗೊಳಿಸಿದರು. ಮುಕ್ತಾಯದ ವಾದಗಳಲ್ಲಿ, ಪ್ರಮುಖ ಪ್ರಾಸಿಕ್ಯೂಟರ್ ಆಗಿರುವ ಆಡಮ್ ಸ್ಕಿಫ್, ಟ್ರಂಪ್ ಅವರನ್ನು ನೈತಿಕ ದಿಕ್ಸೂಚಿ ಇಲ್ಲದ ವ್ಯಕ್ತಿ ಎಂದು ಖಂಡಿಸಿ ಅವರನ್ನು ನಂಬಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಆದ್ದರಿಂದ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕು ಎಂದು ಅವರು ಹೇಳಿದರು.
ಇದು ಟ್ರಂಪ್ ಅವರನ್ನು ಆಯ್ಕೆ ಮಾಡಿದ ಜನರ ನಿರ್ಧಾರವನ್ನು ರದ್ದುಗೊಳಿಸುವ ಪ್ರಯತ್ನ ಎಂದು ಟ್ರಂಪ್ ಅವರ ವಕೀಲ ಜೇ ಸೆಕುಲೋ ಮಹಾಭಿಯೋಗವನ್ನು ಖಂಡಿಸಿದರು.
ಟ್ರಂಪ್ ಅವರನ್ನು ಅಧಿಕಾರದಿಂದ ಉಚ್ಛಾಟಿಸಲು ನವೆಂಬರ್ನಲ್ಲಿ ನಡೆಯುವ ಚುನಾವಣಿ ವರೆಗೂ ಕಾಯಲು ಸಾಧ್ಯವಿಲ್ಲ. ಏಕೆಂದರೆ, ಅವರು ಚುನಾವಣೆಯಲ್ಲಿ ಮೋಸ ಮಾಡಬಹುದು ಎಂದು ಪ್ರಾಸಿಕ್ಯೂಟರ್‌ಗಳಲ್ಲಿ ಒಬ್ಬರಾದ ಹಕೀಮ್ ಜೆಫ್ರಿಸ್ ಹೇಳಿದರು.
ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಗಳ ನಾಲ್ಕು ಗಂಟೆಗಳ ವಾದದ ನಂತರ ಸೋಮವಾರ ಶಿಕ್ಷೆ ಅಥವಾ ಖುಲಾಸೆಗೊಳಿಸುವ ತೀರ್ಪಿನ ಮೇಲೆ ಮತದಾನವನ್ನು ನಿರೀಕ್ಷಿಸಲಾಗಿತ್ತು. ಆದರೆ ಸೆನೆಟರ್‌ಗಳ ವಾದವನ್ನು ಕೇಳುವ ಸಲುವಾಗಿ ಬುಧವಾರಕ್ಕೆ ಅಧಿವೇಶನ ಮುಂದೂಡಲಾಯಿತು.