ಹೈದರಾಬಾದ್: ಕೊರೊನಾ ವೈರಸ್ ಸೋಂಕಿತರಿಗೆ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಅಮೆರಿಕಕ್ಕೆ ರಫ್ತು ಮಾಡಲು ಸಮ್ಮತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಡಿ ಹೊಗಳಿದ್ದಾರೆ.
ನಮ್ಮ ಮನವಿಗೆ ಸ್ಪಂದಿಸಿ ಔಷಧದ ಮೇಲೆ ಹೇರಿದ್ದ ನಿಷೇಧ ತೆರವುಗೊಳಿಸಿದ ಅವರು ಗ್ರೇಟ್. ನಿಜವಾಗಿ ಒಳ್ಳೆಯವರಾಗಿದ್ದಾರೆ. ಭಾರತಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಬೇಕಾಗಿದ್ದರಿಂದ ನಿಷೇಧ ಹೇರಿದ್ದರು. ಆದರೆ ಇದರಿಂದ ಬರುವ ದಿನಗಳಲ್ಲಿ ಸಾಕಷ್ಟು ಒಳ್ಳೆಯ ಸಂಗತಿ ಹೊರಬರಲಿವೆ ಎಂದು ಟ್ರಂಪ್ ಹೇಳಿದ್ದಾರೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಕೆಗೆ ಒತ್ತಡ: ಭಾರತಕ್ಕೆ 'ಪ್ರತೀಕಾರ'ದ ಎಚ್ಚರಿಕೆ ನೀಡಿದ ಟ್ರಂಪ್
ನಾನು ಮೋದಿ ಜೊತೆಗೆ ಈ ಕುರಿತಾಗಿ ಈಗಾಗಲೇ ಮಾತನಾಡಿದ್ದೇನೆ. ನಮಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿ ಒದಗಿಸಿದರೆ ಭಾರತದ ನಿರ್ಧಾರವನ್ನು ಮೆಚ್ಚುತ್ತೇವೆ. ಒಂದೊಮ್ಮೆ ನಿರಾಕರಿಸಿದರೆ ತೊಂದರೆ ಏನಿಲ್ಲ. ಆದರೆ ಸಹಜವಾಗಿ ಪ್ರತೀಕಾರವೂ ಇರಬಹುದು ಎಂದಿದ್ದರು. ಇದರ ಬೆನ್ನಲ್ಲೇ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇರಿದಂತೆ 24 ಔಷಧಿ ಮೇಲಿನ ನಿಷೇಧ ತೆರವುಗೊಳಿಸಿದ್ದ ಭಾರತ, ನೆರೆಯ ರಾಷ್ಟ್ರಗಳಿಗೆ ಮಾನವೀಯ ನೆಲೆಯ ಮೇಲೆ ಔಷಧ ನೀಡುವುದಾಗಿ ಹೇಳಿತ್ತು.