ವಾಷಿಂಗ್ಟನ್: ನವೆಂಬರ್ 3ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಗುರುವಾರ ನಡೆದ ಅಂತಿಮ ಚರ್ಚೆಯಲ್ಲಿ ಭಾರತ 'ಕಲುಷಿತ' ಎಂದು ಹೇಳಿದ್ದಾರೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಬಗ್ಗೆ ಅವರು ತೆಗೆದುಕೊಂಡ ನಿರ್ಧಾರಗಳನ್ನು ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಾಯು ಕಲುಷಿತಗೊಂಡಿದೆ ಎಂದು ಆರೋಪಿಸಿದ್ದಾರೆ.
"ಚೀನಾ, ರಷ್ಯಾ, ಭಾರತವನ್ನು ನೋಡಿ. ಅಲ್ಲಿನ ಗಾಳಿ ಎಷ್ಟು ಮಾಲಿನ್ಯಗೊಂಡಿದೆ" ಎಂದು ಟ್ರಂಪ್ ಕಾರ್ಬನ್ ಹೊರಸೂಸುವಿಕೆಯ ಕುರಿತು ಮಾತನಾಡಿದರು.
"ನಾವು ಕೋಟ್ಯಂತರ ಮರಗಳನ್ನು ಬೆಳೆಸುವ ಕಾರ್ಯಕ್ರಮವನ್ನು ಹೊಂದಿದ್ದೇವೆ. ನಮ್ಮಲ್ಲಿ ಕೆಲವು ವಿಭಿನ್ನ ಕಾರ್ಯಕ್ರಮಗಳಿವೆ. ನಾನು ಪರಿಸರವನ್ನು ಪ್ರೀತಿಸುತ್ತೇನೆ ಮತ್ತು ನನಗೆ ಬೇಕಾಗಿರುವುದು ಉತ್ತಮ ಗಾಳಿ ಮತ್ತು ನೀರು. ನಮ್ಮಲ್ಲಿ ಕಡಿಮೆ ಇಂಗಾಲದ ಹೊರಸೂಸುವಿಕೆ ಇದೆ. ಇದು ದೊಡ್ಡ ಮಾನದಂಡವಾಗಿದೆ" ಎಂದು ಅವರು ಹೇಳಿದರು.
"ಕಳೆದ 35 ವರ್ಷಗಳಲ್ಲಿ ಅಮೆರಿಕ ಅತೀ ಕಡಿಮೆ ಇಂಗಾಲ ಹೊರಸೂಸುವಿಕೆ ಪ್ರಮಾಣ ಹೊಂದಿದೆ. ನಾವು ಈ ಕುರಿತ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಮಾಡಿದ್ದೆವು. ಆದರೆ ಅಲ್ಲಿ ನಾವು ಭಾರೀ ಪ್ರಮಾಣದಲ್ಲಿ ಹಣ ಖರ್ಚು ಮಾಡಿದ್ದರೂ ಸಹ ನಮಗೆ ಉತ್ತಮ ಫಲ ದೊರಕಲಿಲ್ಲ" ಎಂದು 'ಹವಾಮಾನ ಬದಲಾವಣೆ' ಎಂಬ ಪದವನ್ನು ಉಲ್ಲೇಖಿಸದೆ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಜೋ ಬಿಡನ್, "ಹವಾಮಾನ ಬದಲಾವಣೆಯು ಮಾನವೀಯತೆಗೆ ಅಸ್ತಿತ್ವವಾದದ್ದು. ಅದರ ಬಗ್ಗೆ ನಮಗೆ ನೈತಿಕ ಹೊಣೆಗಾರಿಕೆ ಇದೆ. ಈ ಮನುಷ್ಯ (ಟ್ರಂಪ್‌ಗೆ ಸೂಚಿಸಿ) ಇನ್ನೂ ನಾಲ್ಕು ವರ್ಷಗಳಲ್ಲಿ ಹವಾಮಾನವನ್ನು ಸ್ವಚ್ಛಗೊಳಿಸಲು ಮತ್ತು ಇಂಗಾಲ ಹೊರಸೂಸುವಿಕೆಯನ್ನು ಮಿತಿಗೊಳಿಸಲು ಹಾಕಲಾದ ಎಲ್ಲ ನಿಯಮಗಳನ್ನು ತೆಗೆದುಹಾಕುತ್ತಾನೆ" ಎಂದು ಬೈಡೆನ್ ಹೇಳಿದರು.
ಅಧ್ಯಕ್ಷೀಯ ಚುನಾವಣೆಯ ಅಂತಿಮ ಚರ್ಚೆಯು ಟೆನ್ನೆಸ್ಸೀಯ ನ್ಯಾಶ್‌ವಿಲ್ಲೆಯಲ್ಲಿರುವ ಬೆಲ್ಮಾಂಟ್ ವಿಶ್ವವಿದ್ಯಾಲಯದ ಕರ್ಬ್ ಈವೆಂಟ್ ಕೇಂದ್ರದಲ್ಲಿ ನಡೆಯಿತು.