ವಾಷಿಂಗ್ಟನ್: ಅನೇಕ ದಿನಗಳ ಬಳಿಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯೊಂದನ್ನು ನೀಡಿದ್ದು, ಕೊರೊನಾ ವೈರಸ್ ಮೂಲದ ಕುರಿತ ತಮ್ಮ ನಿಲುವನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ.
"ವುಹಾನ್ ಲ್ಯಾಬ್‌ನಿಂದಲೇ ಚೀನಾ ವೈರಸ್ ಬಂದಿದ್ದು ಎಂಬ ನನ್ನ ಹೇಳಿಕೆ ಸರಿಯಾಗಿಯೇ ಇತ್ತು. 'ಶತ್ರು' ಎಂದು ಕರೆಯಲ್ಪಡುವವರೂ ಸೇರಿದಂತೆ ಈಗ ಎಲ್ಲರೂ ನನ್ನ ಹೇಳಿಕೆ ಸರಿ ಎಂದು ಹೇಳಲು ಪ್ರಾರಂಭಿಸಿದ್ದಾರೆ. ಈ 'ಲ್ಯಾಬ್ ಸೋರಿಕೆ'ಯಿಂದ ಉಂಟಾದ ಸಾವು ಮತ್ತು ವಿನಾಶಕ್ಕೆ ಚೀನಾಕ್ಕೆ ದಂಡ ವಿಧಿಸಬೇಕಿದೆ ಎಂದು ಟ್ರಂಪ್ ಕರೆ ನೀಡಿದ್ದಾರೆ.
ಡಾ. ಫೌಸಿ ಅವರ ಆಗ್ರಹವನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಚೀನಾ ಕೃತ್ಯದಿಂದ ಉಂಟಾದ ಸಾವು-ನೋವಿಗೆ ಅಮೆರಿಕ ಮತ್ತು ಜಗತ್ತಿಗೆ 10 ಟ್ರಿಲಿಯನ್ ಡಾಲರ್ ದಂಡವನ್ನು ಚೀನಾ ಪಾವತಿಸಬೇಕಿದೆ ಎಂದು ಟ್ರಂಪ್ ಹೇಳಿದ್ದಾರೆ. ಕೊರೊನಾ ಸ್ವಾಭಾವಿಕ ವೈರಸ್ ಅಲ್ಲವೇ ಅಲ್ಲ, ವೈರಸ್ ಮೂಲ ಬಿಚ್ಚಿಡಲು ಚೀನಾ ಮುಕ್ತ ತನಿಖೆಗೆ ಸಿದ್ಧವಾಗಬೇಕು ಎಂದು ಅಮೆರಿಕದ ಉನ್ನತ ಸಾಂಕ್ರಾಮಿಕ ರೋಗ ತಜ್ಞ ಆಂಥೋನಿ ಫೌಸಿ ಮೊನ್ನಯಷ್ಟೇ ಹೇಳಿದ್ದರು.
ಇದನ್ನೂ ಓದಿ: ಕೊರೊನಾ ಸ್ವಾಭಾವಿಕ ವೈರಸ್ ಅಲ್ಲವೇ ಅಲ್ಲ, ಮುಕ್ತ ತನಿಖೆಗೆ ಚೀನಾ ಕರೆ ನೀಡಲಿ : ಅಮೆರಿಕ ಸಾಂಕ್ರಾಮಿಕ ರೋಗ ತಜ್ಞ
2019ರ ಡಿಸೆಂಬರ್ನಲ್ಲಿ ಮೊದಲ ಕೋವಿಡ್ ಪ್ರಕರಣ ಚೀನಾದ ವುಹಾನ್ನಲ್ಲಿ ವರದಿಯಾಗಿತ್ತು. ಬಳಿಕ ವಿಶ್ವಾದಾದ್ಯಂತ 17 ಕೋಟಿ ಜನರಿಗೆ ವೈರಸ್ ಅಂಟಿದ್ದು, 37 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಉದ್ದೇಶಪೂರ್ವಕವಾಗಿ ಸೋಂಕು ಪಸರಿಸಲು ಚೀನಾ ತನ್ನ ವುಹಾನ್ನ ಪ್ರಯೋಗಾಲಯದಲ್ಲೇ ವೈರಸ್ ಸೃಷ್ಟಿಸಿದೆ ಎಂದು ಅಮೆರಿಕ ಮೊದಲಿಂದಲೂ ಆರೋಪ ಮಾಡುತ್ತಾ ಬಂದಿದೆ. ಈ ಬಗ್ಗೆ ತನಿಖೆ ಚುರುಕುಗೊಳಿಸುವಂತೆ ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್, ಯುಎಸ್ ಗುಪ್ತಚರ ಸಂಸ್ಥೆಗೆ ಸೂಚಿಸಿದ್ದರು.