ವಾಷಿಂಗ್ಟನ್: ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದ್ದು, ಶೀಘ್ರದಲ್ಲೇ ಕೆಲಸಕ್ಕೆ ವಾಪಸ್ ಆಗುತ್ತೇನೆ ಎಂದು ಕೋವಿಡ್-19 ಸೋಂಕಿಗೆ ಒಳಗಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊರೊನಾ ದೃಢಪಟ್ಟ ಹಿನ್ನೆಲೆ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಯಲ್ಲಿ ಟ್ರಂಪ್ ದಂಪತಿ ಕೋವಿಡ್ -19 ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಪ್ರಾಯೋಗಿಕ ಕೋವಿಡ್ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಈ ಕುರಿತಾಗಿ ಡೊನಾಲ್ಡ್ ಟ್ರಂಪ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದಿದ್ದಾರೆ. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಆದಷ್ಟು ಶೀಘ್ರದಲ್ಲೇ ಕೆಲಸಕ್ಕೆ ವಾಪಸ್ ಆಗುತ್ತೇನೆ ಮತ್ತು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದಿದ್ದಾರೆ. ಪತ್ನಿ ಮೆಲಾನಿಯಾ ಆರೋಗ್ಯ ಕೂಡಾ ಚೇತರಿಸಿಕೊಳ್ಳುತ್ತಿದ್ದು, ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ ವಿಶ್ವದ ಎಲ್ಲಾ ಗಣ್ಯರಿಗೂ ಟ್ರಂಪ್ ಧನ್ಯವಾದ ತಿಳಿಸಿದ್ದಾರೆ.
ನಾಲ್ಕು ನಿಮಿಷಗಳ ಕಾಲ ಇರುವ ವಿಡಿಯೋ ಸಂದೇಶವನ್ನು ಟ್ರಂಪ್ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ, ನನ್ನ ಕೆಲಸವನ್ನು ಪೂರ್ಣಗೊಳಿಸಲು ಮತ್ತು ನಾನು ಅಮೆರಿಕವನ್ನು ಮತ್ತೆ ಮೇಲ್ಮಟ್ಟಕ್ಕೆ ಕೊಂಡೊಯ್ಯಬೇಕಾಗಿರುವುದರಿಂದ ಹಿಂತಿರುಗಬೇಕಾಗಿದೆ ಎಂದು ಟ್ರಂಪ್ ಮಿಲಿಟರಿ ಆಸ್ಪತ್ರೆಯಿಂದ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್ ಪುತ್ರಿ ಇವಾಂಕ ಟ್ರಂಪ್, ನನ್ನ ತಂದೆ ಹೋರಾಟಗಾರರು. ಅವರು ಇದನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಯಾರಾದರೂ ಅವರನ್ನು ಸೋಲಿಸಲು ಸಾಧ್ಯವಾದರೆ ಅದು ಅವರೇ. ಅವರು ನನಗೆ ತಿಳಿದಿರುವಂತೆ ಕಠಿಣ ಕೆಲಸಗಾರ, ಮತ್ತು ವಾಲ್ಟರ್ ರೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದುಕೊಂಡೇ ಅಮೆರಿಕದ ಜನರ ಪರವಾಗಿ ಅವರು ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಗುರುವಾರ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯ ಟ್ರಂಪ್ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗಾಗಿ ಅವರು ಶುಕ್ರವಾರ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿದ್ರು.