ವಾಷಿಂಗ್ಟನ್: ಮಹಾಮಾರಿ ಕೊರೊನಾ ವೈರಸ್ ಅಬ್ಬರ ಜೋರಾಗಿದ್ದ ಕಾರಣ ಭಾರತೀಯ ಉದ್ಯೋಗಿಗಳಿಗೆ ಶಾಕ್ ನೀಡಿದ್ದ ವಿಶ್ವದ ದೊಡ್ಡಣ್ಣ ಹೆಚ್-1ಬಿ ವೀಸಾ ವರ್ಷಾಂತ್ಯದವರೆಗೆ ತಾತ್ಕಾಲಿಕವಾಗಿ ರದ್ದು ಮಾಡಿ ಆದೇಶ ಹೊರಡಿಸಿತ್ತು. ಆದರೆ ಇದೀಗ ಷರತ್ತುಗಳೊಂದಿಗೆ ಅದರಲ್ಲಿ ವಿನಾಯತಿ ನೀಡಲಾಗಿದೆ.
ಈ ಮೂಲಕ ಅಮೆರಿಕದ ದೈತ್ಯ ಕಂಪನಿಳ ಹೋರಾಟಕ್ಕೂ ಟ್ರಂಪ್ ಆಡಳಿತ ಮಣಿದಿದೆ. ಈ ವಿಚಾರದ ಬಗ್ಗೆ ಅಮೆರಿಕದ ಪ್ರತಿಷ್ಠಿತ ಕಂಪನಿಗಳು ಕೋರ್ಟ್ ಮೆಟ್ಟಿಲೇರಿದ್ದವು. ವೀಸಾ ನಿಯಮಗಳನ್ನ ಬಿಗಿಗೊಳಿಸಿದ್ದ ಟ್ರಂಪ್ ಆಡಳಿತದ ವಿರುದ್ಧ ಫೇಸ್ಬುಕ್, ಅಮೆಜಾನ್ , ಆ್ಯಪಲ್ ಸೇರಿದಂತೆ ಇನ್ನಿತರ ಕಂಪನಿಗಳು ವಿರೋಧಿಸಿದ್ದವು. ಈ ಹಿಂದಿನ ಕೆಲಸಕ್ಕಾಗಿ ಅಮೆರಿಕಕ್ಕೆ ಮರಳುತ್ತಿದ್ದರೆ ಅಂತಹವರಿಗೆ ಎಚ್-1 ಬಿ ವೀಸಾ ಪಡೆಯಲು ಅನುಮತಿ ನೀಡಲಾಗಿದೆ. ಹೀಗಾಗಿ ಹಲವು ಭಾರತೀಯ ಹಾಗೂ ಇನ್ನಿತರ ದೇಶಗಳ ಉದ್ಯೋಗಿಗಳು ಈಗ ನಿರಾಳರಾಗಿದ್ದಾರೆ.
ಪ್ರಾಥಮಿಕ ವೀಸಾ ಹೊಂದಿರುವವರು ಮಕ್ಕಳು ಹಾಗೂ ಪತ್ನಿ ಜತೆ ಪ್ರಯಾಣ ಬೆಳೆಸಲು ಇದೀಗ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ. ತಾವು ವಾಸವಾಗಿದ್ದ ಸ್ಥಳದಲ್ಲಿ ಕೆಲಸ ಮಾಡಲು ಬಯಸುವವರು ಪ್ರಯಾಣ ಬೆಳೆಸಬಹುದಾಗಿದ್ದು, ಆರ್ಥಿಕ ಚೇತರಿಕೆ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಅಮೆರಿಕದಲ್ಲಿ ಕೊರೊನಾ ನಿಯಂತ್ರಣ ಮಾಡುವ ಉದ್ದೇಶದಿಂದ ಈ ಹಿಂದೆ ಹೆಚ್-1ಬಿ ವೀಸಾ ರದ್ದು ಮಾಡಲಾಗಿತ್ತು. ಇದರಿಂದ ಅಮೆರಿಕಾಗೆ ಉದ್ಯೋಗ ಹುಡುಕಿಕೊಂಡು ಬರುವವರಿಗೆ ತೊಂದರೆಯಾಗಿತ್ತು. ಈ ನಿರ್ಧಾರದಿಂದ ಭಾರತದ ಟೆಕ್ಕಿಗಳಿಗೆ ಹೆಚ್ಚಿನ ರೀತಿಯಲ್ಲಿ ತೊಂದರೆಯಾಗಿತ್ತು. ಆದರೆ ಇದೀಗ ಕೆಲವೊಂದು ಷರತ್ತುಗಳೊಂದಿಗೆ ವೀಸಾದಲ್ಲಿ ವಿನಾಯತಿ ನೀಡಲಾಗಿದೆ. ತಾಂತ್ರಿಕ ತಜ್ಞರು, ಹಿರಿಯ ವ್ಯವಸ್ಥಾಪಕರು ಮತ್ತು ಎಚ್ -1 ಬಿ ವೀಸಾಗಳನ್ನು ಹೊಂದಿರುವ ಇತರ ಕಾರ್ಮಿಕರ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ದೇಶದ ಆರ್ಥಿಕ ಚೇತರಿಕೆಗೆ ಪೂರಕವಾಗುವಂತೆ ವೀಸಾ ನಿಯಮಗಳನ್ನ ಸಡಿಲಿಕೆ ಮಾಡಲಾಗಿದೆ.
ಸದ್ಯ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವು ಜೋರಾಗಿರುವ ಕಾರಣ ಭಾರತೀಯರ ಗಮನ ಸೆಳೆಯುವ ಉದ್ದೇಶದಿಂದ ಡೊನಾಲ್ಡ್ ಟ್ರಂಪ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ.