ವಾಷಿಂಗ್ಟನ್: ಕೋವಿಡ್ ವೈರಸ್ ವಿಚಾರದಲ್ಲಿ ಅಧ್ಯಕ್ಷ ಟ್ರಂಪ್ ಹಾಗೂ ನೂತನ ಚುನಾಯಿತ ಅಧ್ಯಕ್ಷರ ನಡುವಿನ ವ್ಯಾಕ್ಸಿನ್ ವಾಕ್ ಸಮರ ಮುಂದುವರಿದೆ. ಡೊನಾಲ್ಡ್ ಟ್ರಂಪ್ ಅವರು ಲಸಿಕೆ ವಿತರಣೆ ಸಂಬಂಧ ಕೈಗೊಂಡಿರುವ ಕ್ರಮಗಳನ್ನು ಪ್ರಶ್ನಿಸಿರುವ ಜೋ ಬೈಡನ್, ಟ್ರಂಪ್ ಅವರು ಕೈಗೊಂಡಿರುವ ನಿರ್ಧಾರಗಳಿಂದ ಲಸಿಕೆಯ ವೇಳಾಪಟ್ಟಿಯಲ್ಲಿ ಹಿನ್ನಡೆಯಾಗಿದೆ ಎಂದು ಆರೋಪಿಸಿದ್ದಾರೆ.
ವ್ಯಾಕ್ಸಿನ್ ವಿಚಾರದಲ್ಲಿ ಅಮೆರಿಕ ಅತಿ ದೊಡ್ಡ ಸವಾಲನ್ನು ಎದುರಿಸುತ್ತಿದೆ ಎಂದು ಬೈಡನ್ ಹೇಳಿರುವುದಾಗಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಬಿಬಿಸಿ ವರದಿ ಮಾಡಿದೆ. ಡಿಸೆಂಬರ್ ಅಂತ್ಯದ ವೇಳೆಗೆ 20 ಮಿಲಿಯನ್ ಅಮೆರಿಕನ್ನರಿಗೆ ವ್ಯಾಕ್ಸಿನ್ ಒದಗಿಸುವುದಾಗಿ ಟ್ರಂಪ್ ಆಡಳಿತ ಭರವಸೆ ನೀಡಿತ್ತು. ಆದರೆ, ಈವರೆಗೆ ಆ ಕಾರ್ಯ ಪೂರ್ಣವಾಗಿಲ್ಲ. ಲಸಿಕೆಗಳನ್ನು ವಿತರಿಸುವ ಟ್ರಂಪ್ ಆಡಳಿತದ ಯೋಜನೆ ತೀರಾ ಹಿಂದುಳಿದಿದೆ ಎಂದು ಅವರು ದೂರಿದ್ದಾರೆ.
ಓದಿ: ಭಾರತ-ಬ್ರಿಟನ್ ನಡುವೆ ವಿಮಾನ ಸಂಚಾರ ಬಂದ್
ಅನುಮೋದನೆ ಸಿಕ್ಕ ಕೂಡಲೇ ದೇಶದ ಎಲ್ಲಾ ರಾಜ್ಯಗಳಲ್ಲಿ ವ್ಯಾಕ್ಸಿನ್ ಹಂಚಿಕೆ ಮಾಡಲಾಗುವುದು ಎಂದು ಟ್ರಂಪ್ ಹೇಳಿರುವುದಾಗಿ ಎಂದು ಬೈಡನ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ನಾವು ಕೇವಲ ವ್ಯಾಕ್ಸಿನ್ ಅಭಿವೃದ್ಧಿ ಪಡಿಸುತ್ತಿಲ್ಲ. ಅತಿ ವೇಗವಾಗಿ ಈ ಪ್ರಕ್ರಿಯೆ ನಡೆಯಲು ಹೆಚ್ಚಿನ ಅನುದಾನ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
2021ರ ಜನವರಿ 20 ರಂದು ಅಧಿಕಾರ ವಹಿಸಿಕೊಳ್ಳುವ ವೇಳೆ ಬೈಡನ್ ತಮ್ಮ ಅಧ್ಯಕ್ಷತೆಯ ಮೊದಲ 100 ದಿನಗಳಲ್ಲಿ 100 ಮಿಲಿಯನ್ ಅಮೆರಿಕನ್ನರಿಗೆ ಲಸಿಕೆ ನೀಡುವುದಾಗಿ ವಾಗ್ದಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದಲ್ಲಿ 19.4 ಮಿಲಿಯನ್ ಮಂದಿಗೆ ಸೋಂಕು ತಗುಲಿದ್ದು, 3,37,000 ಮಂದಿ ಈಗಾಗಲೇ ಬಲಿಯಾಗಿದ್ದಾರೆ.