ನ್ಯೂಯಾರ್ಕ್: ಅಮೆರಿಕ ಮತ್ತು ಚೀನಾ ನಡುವೆ ಉಲ್ಬಣಗೊಂಡ ವಾಣಿಜ್ಯ ಸಮರವು ಕಮ್ಯುನಿಸ್ಟ್ ರಾಷ್ಟ್ರದಾಚೆ ಪರ್ಯಾಯ ಸ್ಥಳಗಳನ್ನು ಹುಡುಕುತ್ತಿರುವ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸಲು ಭಾರತಕ್ಕೆ ಇದು 'ಸೂಕ್ತ ಸಮಯ' ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಅರವಿಂದ್ ಪನಾಗರಿಯಾ ವಿಶ್ಲೇಷಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮೆರಿಕದೊಂದಿಗೆ 'ಕೊಡು ಮತ್ತು ತೆಗೆದುಕೊಳ್ಳುವ' ವಿವಾದಗಳನ್ನು ಮಾತುಕತೆಗಳ ಮೂಲಕ ಬಗೆಹರಿಸಿಕೊಂಡು ಆಮದು ಮಾಡಿಕೊಳ್ಳುತ್ತಿರುವ ಮೋಟಾರ್ ಸೈಕಲ್ ಹಾಗೂ ವಾಹನಗಳ ಮೇಲಿನ ಸುಂಕವನ್ನು ಕಡಿತಗೊಳಿಸುವಂತೆ ಭಾರತಕ್ಕೆ ಕೋರಿದರು.
ತಮ್ಮ ವಹಿವಾಟಿನ ಸುರಕ್ಷಿತ ತಾಣಗಳನ್ನು ಅರಸಿ ಚೀನಾದಿಂದ ಹೊರಬರುತ್ತಿರುವ ಬೃಹತ್ ಬಹುರಾಷ್ಟ್ರೀಯ ಕಂಪನಿಗಳನ್ನು ತನ್ನತ್ತ ಆಕರ್ಷಿಸಲು ಭಾರತಕ್ಕೆ ಇದು ಅತ್ಯಂತ ಮಹತ್ವದ ಸಮಯ. ಈ ಬಗ್ಗೆ ಏನಾದರೂ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ನೆಲೆ ಹುಡುಕುತ್ತಿರುವ ಬಹುರಾಷ್ಟ್ರೀಯ ಕಂಪನಿಗಳನ್ನು ಭಾರತ ಹೇಗಾದರೂ ಮಾಡಿ ಆಕರ್ಷಿಸಿದರೆ ಅನ್ಯರ ಪಾಲಾಗಲಿರುವ ಲಾಭವನ್ನು ತಾನು ಬಾಚಿಕೊಳ್ಳಲು ಇದೊಂದು ಅವಕಾಶ. ವೇತನ ಹೆಚ್ಚಳ ಮತ್ತು ಅಮೆರಿಕ ಜತೆಗಿನ ವಾಣಿಜ್ಯಾತ್ಮಕ ಸಂಘರ್ಷ ಬಹುರಾಷ್ಟ್ರೀಯ ಕಂಪನಿಗಳಿಗೆ ನ್ಯೂಯಾರ್ಕ್ ಮಾರುಕಟ್ಟೆಯ ಮುಕ್ತ ಪ್ರವೇಶದ ದ್ವಾರ ಮುಚ್ಚಿದೆ ಎಂದು ಪನಾಗರಿಯಾ ಹೇಳಿದರು.