ಹೋಸ್ಟನ್ (ಅಮೆರಿಕ): ಕೋವಿಡ್ ಆರ್ಭಟದಿಂದಾಗಿ ಮೆಡಿಕಲ್ ಆಕ್ಸಿಜನ್ ಸೇರಿದಂತೆ ವ್ಯಕ್ತಿಯ ಜೀವ ಉಳಿಸಲು ಬೇಕಾದ ಅಗತ್ಯ ವಸ್ತುಗಳ ಅಭಾವ ಎದುರಿಸುತ್ತಿರುವ ಭಾರತದ ಸಹಾಯಕ್ಕೆ ಭಾರತೀಯ-ಅಮೆರಿಕನ್ನರು ಮುಂದೆ ಬಂದಿದ್ದಾರೆ.
ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರ 'ಸೇವಾ ಇಂಟರ್ನ್ಯಾಷನಲ್ ಯುಎಸ್ಎ' ಲಾಭರಹಿತ ಸಂಸ್ಥೆಯು ಇನ್ನೆರಡು ದಿನಗಳಲ್ಲಿ ತುರ್ತು ವೈದ್ಯಕೀಯ ಸಾಧನಗಳು ಹಾಗೂ 400 ಆಮ್ಲಜನಕ ಸಾಂದ್ರಕಗಳನ್ನು ರವಾನಿಸುತ್ತಿದೆ. ಅಲ್ಲದೇ ಐದು ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸುವ ಗುರಿ ಹೊಂದಿದ್ದು, ಈಗಾಗಲೇ 1.5 ಮಿಲಿಯನ್ ಡಾಲರ್ಗಳನ್ನು ಸಂಗ್ರಹಿಸಿದೆ.
ಹೆಚ್ಚಿನ ಓದಿಗೆ: ಭಾರತಕ್ಕೆ 5 ಟನ್ ಆಮ್ಲಜನಕ ಸಾಂದ್ರಕ ಕಳುಹಿಸಿದ ಅಮೆರಿಕ
ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಉಂಟಾಗುವ ಆಮ್ಲಜನಕದ ಕೊರತೆ ನೀಗಿಸಲು ಸೇವಾ ಸಂಸ್ಥೆಯು ‘ಹೆಲ್ಪ್ ಇಂಡಿಯಾ ಡಿಫೀಟ್ ಕೋವಿಡ್ -19’ (ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ ಸಹಕರಿಸಿ) ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು, ವಿಶ್ವದಾದ್ಯಂತ ಅನೇಕ ಪೂರೈಕೆದಾರರಿಂದ ಆಕ್ಸಿಜನ್ ಸಂಗ್ರಹಿಸುತ್ತಿದೆ.
ಸೇವಾ ಸಂಸ್ಥೆಯು ಸುಮಾರು 10,000 ಕುಟುಂಬಗಳು, 1,000ಕ್ಕೂ ಹೆಚ್ಚು ಅನಾಥಾಶ್ರಮ-ವೃದ್ಧಾಶ್ರಮಗಳಿಗೆ ಆಹಾರ ಮತ್ತು ಔಷಧಿಗಳನ್ನು ಒದಗಿಸುತ್ತಿದೆ ಎಂದು ಹೋಸ್ಟನ್ನಲ್ಲಿರುವ ಸಂಸ್ಥೆಯ ವಕ್ತಾರ ಗೀತೇಶ್ ದೇಸಾಯಿ ತಿಳಿಸಿದ್ದಾರೆ.