ವಾಷಿಂಗ್ಟನ್(ಅಮೆರಿಕ): ಸದ್ಯಕ್ಕೆ ಸೇನೆಯನ್ನು ಹಿಂತೆಗೆದುಕೊಂಡಿದೆ ಎಂಬ ವರದಿಗಳ ಬೆನ್ನಲ್ಲೇ ರಷ್ಯಾ ಮುಂಬರುವ ದಿನಗಳಲ್ಲಿ ಉಕ್ರೇನ್ ಮೇಲೆ ದಾಳಿ ಮಾಡುವ ಎಲ್ಲಾ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ.
ಮುಂದಿನ ಕೆಲವೇ ದಿನಗಳಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುತ್ತದೆ. ಉಕ್ರೇನ್ ಗಡಿಯಿಂದ ತಮ್ಮ ಸೇನೆಯನ್ನು ರಷ್ಯಾ ಸ್ಥಳಾಂತರ ಮಾಡಿಲ್ಲ. ಅಲ್ಲಿ ಇನ್ನೂ ಹೆಚ್ಚು ಸೇನೆಯನ್ನು ಜಮಾವಣೆ ಮಾಡಲಾಗಿದೆ. ಉಕ್ರೇನ್ ಮೇಲೆ ದಾಳಿ ನಡೆಸಲು ಅವರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾ ಸಿದ್ಧತೆ ನಡೆಸುತ್ತಿದೆ ಎಂದು ಆರೋಪ ಮಾಡುತ್ತಲೇ ಈ ಸಂಘರ್ಷವನ್ನು ಕಡಿಮೆ ಮಾಡಲು ರಾಜತಾಂತ್ರಿಕ ಮಾತುಕತೆಗಳು ಇನ್ನೂ ಜೀವಂತವಾಗಿವೆ ಎಂದು ಬೈಡನ್ ಹೇಳಿದ್ದಾರೆ. ಇದೇ ಕಾರಣಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್ ಅವರನ್ನು ವಿಶ್ವಸಂಸ್ಥೆಗೆ ತೆರಳಿದ್ದು, ಇದೇ ವಿಚಾರವಾಗಿ ಹೇಳಿಕೆ ನೀಡಲಿದ್ದಾರೆ ಎಂದು ಬೈಡನ್ ಹೇಳಿದ್ದರು.
ಶನಿವಾರವಷ್ಟೆ ಬೈಡನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಬ್ಬರೂ ದೂರವಾಣಿಯಲ್ಲಿ ಮಾತನಾಡಿದ್ದರು. ಇದಾದ ಕೆಲವೇ ಗಂಟೆಗಳ ನಂತರ ಪ್ರತಿಕ್ರಿಯೆ ನೀಡಿದ್ದ ಪುಟಿನ್ ಅಮೆರಿಕ ಅಧ್ಯಕ್ಷ ಬೈಡನ್ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುತ್ತದೆ ಎಂದು ಹೇಳುವ ಮೂಲಕ ಆ ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಆರ್ಐಎ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ: ಬ್ರೆಜಿಲ್ನಲ್ಲಿ ಭೂಕುಸಿತ, ಪ್ರವಾಹ: 117 ಮಂದಿ ದುರ್ಮರಣ
ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್, ರಷ್ಯಾ ತುರ್ತು ಸಭೆಯನ್ನು ಕರೆಯುತ್ತದೆ. ರಷ್ಯನ್ನರು ಅಪಾಯದಲ್ಲಿದ್ದಾರೆ, ಅವರನ್ನು ರಕ್ಷಿಸಬೇಕು ಎನ್ನುತ್ತದೆ. ನಂತರ ತಾನೇ ದಾಳಿ ನಡೆಸುತ್ತದೆ. ಮಾತುಕತೆಗಳನ್ನು ಸ್ಥಗಿತಗೊಳಿಸುತ್ತದೆ ಎಂದು ಆರೋಪಿಸಿದ್ದರು.
ಈಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾದರೆ, ರಷ್ಯಾ ತನ್ನ ಸೈನಿಕರು, ಟ್ಯಾಂಕ್‌ಗಳು ಮತ್ತು ವಿಮಾನಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಬ್ಲಿಂಕನ್ ವಿಶ್ವಸಂಸ್ಥೆಯಲ್ಲಿ ಸಲಹೆ ನೀಡಿದ್ದರು.