ವಾಷಿಂಗ್ಟನ್(ಅಮೆರಿಕ) : ಪ್ರಜಾಪ್ರಭುತ್ವ ಶೃಂಗಸಭೆ ನಡೆಸಲು ನಿರ್ಧಾರ ಕೈಗೊಂಡಿರುವ ಅಮೆರಿಕ ನಿರ್ಧಾರದ ವಿರುದ್ಧ ಚೀನಾ ಮತ್ತು ರಷ್ಯಾ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ. ಪ್ರಜಾಪ್ರಭುತ್ವ ಶೃಂಗಸಭೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಹೊಸ ಅಂತರವನ್ನು ಸೃಷ್ಟಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಡಿಸೆಂಬರ್ 9 ಮತ್ತು 10ರಂದು ನಡೆಯಲಿರುವ ಪ್ರಜಾಪ್ರಭುತ್ವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು 110 ದೇಶಗಳನ್ನು ಅಮೆರಿಕ ಆಹ್ವಾನಿಸಿದೆ. ಆ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ಪ್ರಜಾಪ್ರಭುತ್ವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾ ಮತ್ತು ಚೀನಾವನ್ನು ಅಮೆರಿಕ ಆಹ್ವಾನಿಸಿಲ್ಲ.
ಅಮೆರಿಕ ಪ್ರಜಾಪ್ರಭುತ್ವ ಶೃಂಗಸಭೆಯನ್ನು ನಡೆಸಲಿದೆ. ಈ ಕಾರ್ಯಕ್ರಮಕ್ಕೆ ಯಾರ್ಯಾರು ಹಾಜರಾಗಬೇಕೆಂದು ತಾನೇ ನಿರ್ಧಾರ ಮಾಡಿದೆ. ಯಾವ ದೇಶ ಪ್ರಜಾಪ್ರಭುತ್ವ ದೇಶ? ಯಾವ ದೇಶ ಪ್ರಜಾಪ್ರಭುತ್ವ ದೇಶವಲ್ಲ? ಎಂದು ತಾನೇ ನಿರ್ಧಾರ ಮಾಡಿದೆ ಎಂದು ಅಮೆರಿಕಕ್ಕೆ ಚೀನಾ ಮತ್ತು ರಷ್ಯಾದ ರಾಯಭಾರಿಯಾದ ಕ್ವಿನ್ ಗಾಂಗ್ ಮತ್ತು ಅನಾಟೊಲಿ ಆಂಟೊನೊವ್ ಹೇಳಿದ್ದಾರೆಂದು ವಾಷಿಂಗ್ಟನ್ ಮೂಲದ ನ್ಯಾಷನಲ್ ಇಂಟರೆಸ್ಟ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನ ಮಾಹಿತಿ ನೀಡಿದೆ.
ಈ ಪ್ರಜಾಪ್ರಭುತ್ವ ಶೃಂಗಸಭೆ ಶೀತಲ ಸಮರದ ಇನ್ನೊಂದು ರೂಪವಾಗಿದೆ. ಜಗತ್ತಿನಲ್ಲಿ ಬಿರುಕು ಮೂಡಿಸುತ್ತದೆ. ಆಧುನಿಕ ಪ್ರಪಂಚದ ಬೆಳವಣಿಗೆಯನ್ನು ಇದು ವಿರೋಧಿಸುತ್ತದೆ. ಈ ಪ್ರಜಾಪ್ರಭುತ್ವ ಶೃಂಗಸಭೆಯನ್ನು ರಷ್ಯಾ ಮತ್ತು ಚೀನಾ ಬಲವಾಗಿ ಖಂಡಿಸುತ್ತವೆ ಎಂದು ರಾಯಭಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಪ್ರಜಾಪ್ರಭುತ್ವದ ಹಿನ್ನಡೆ, ವಿಶ್ವಾದ್ಯಂತ ಹಕ್ಕು ಮತ್ತು ಸ್ವಾತಂತ್ರ್ಯ ದಮನ ನಿಲ್ಲಿಸುವ ಗುರಿಯನ್ನು ಪ್ರಜಾಪ್ರಭುತ್ವದ ಶೃಂಗಸಭೆ ಹೊಂದಿದೆ. ದೇಶಗಳಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ರಾಷ್ಟ್ರಗಳ ನಾಯಕರಿಗೆ ವೇದಿಕೆ ಒದಗಿಸಲಾಗುತ್ತದೆ ಎಂದು ಅಮೆರಿಕ ಈಗಾಗಲೇ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಪಂಜಾಬ್ನಲ್ಲಿ 17 ವರ್ಷದ ಪಾಕ್ ಮೂಲದ ಬಾಲಕನ ಬಂಧಿಸಿದ ಬಿಎಸ್ಎಫ್