ವಾಷಿಂಗ್ಟನ್: ದಕ್ಷಿಣ ಫ್ಲೋರಿಡಾದ ಮಿಯಾಮಿ ಬೀಚ್ ಬಳಿ 12 ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದ ಘಟನೆಯಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿದೆ. ಈ ದುರಂತದಲ್ಲಿ ಮತ್ತೆ ನಾಲ್ಕು ಶವಗಳು ಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಕಾಲಮಾನ ಜೂನ್ 25, ಶುಕ್ರವಾರ ಮುಂಜಾನೆ 1.30 ರ ಸುಮಾರಿಗೆ ಕಟ್ಟಡದ ಈಶಾನ್ಯ ಭಾಗದಲ್ಲಿರುವ ಕಾರಿಡಾರ್ ಸಂಪೂರ್ಣ ಕುಸಿದು ದುರಂತ ಸಂಭವಿಸಿತ್ತು. ಆಗ ಸಂಭವಿಸಿದ ಅವಘಡದಲ್ಲಿ ಓರ್ವ ಮೃತಪಟ್ಟಿದ್ದು, ಸುಮಾರು 140ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದರು.
ಅವಶೇಷಗಳಡಿ ಸಿಲುಕಿರುವವರನ್ನು ಹೊರತರಲು ಅಲ್ಲಿನ ಸರ್ಕಾರ ತ್ವರಿತ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತ್ತು. ಕ್ರಮೇಣವಾಗಿ ಇಲ್ಲಿಯವರೆಗೆ 12 ಜನರ ಮೃತದೇಹಗಳು ಪತ್ತೆಯಾಗಿದ್ದವು. ಬುಧವಾರ ಮತ್ತೆ ನಾಲ್ವರ ಶವ ಪತ್ತೆಯಾಗಿದ್ದರಿಂದ ಮೃತ ಸಂಖ್ಯೆ 16ಕ್ಕೇರಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಫ್ಲೋರಿಡಾ ಸರ್ಫ್ಸೈಡ್ನಲ್ಲಿ ನಡೆದ ಕಟ್ಟಡ ದುರಂತದಲ್ಲಿ ಇಲ್ಲಿಯವರೆಗೆ ಒಟ್ಟು 16 ಶವಗಳು ಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದರಲ್ಲಿ ಭಾರತ ಮೂಲದ ದಂಪತಿಗಳು ಸಿಲುಕಿದ್ದರು.
ಓದಿ: ಅಮೆರಿಕದಲ್ಲಿ 12 ಅಂತಸ್ತಿನ ಕಟ್ಟಡದ ಒಂದು ಭಾಗ ದಿಢೀರ್ ಕುಸಿತ: ನೂರಾರು ಜನ ನಾಪತ್ತೆ