ವ್ಯಾಂಕೋವರ್(ಕೆನಡಾ): ಮೂಲನಿವಾಸಿ ಮಕ್ಕಳಿಗಾಗಿಯೇ ವಸತಿ ಶಾಲೆಯಿದ್ದ ಸ್ಥಳದಲ್ಲಿ ಸುಮಾರು 600 ಮೃತದೇಹಗಳಿರುವ ಸಮಾಧಿಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ ಎಂದು ಕೆನಡಾದ ಮೂಲ ನಿವಾಸಿಗಳ ನಾಯಕರು ಅಚ್ಚರಿಯ ಮಾಹಿತಿ ನೀಡಿದ್ದಾರೆ.
1899ರಿಂದ 1997ರವರೆಗೆ ಅಸ್ತಿತ್ವದಲ್ಲಿದ್ದ ಮಾರಿವಾಲ್ ಇಂಡಿಯನ್ ರೆಸಿಡೆನ್ಶಿಯಲ್ ಸ್ಕೂಲ್ ಆವರಣದಲ್ಲಿ ಈ ಸಮಾಧಿಗಳು ಪತ್ತೆಯಾಗಿವೆ. ಇನ್ನೊಂದು ಅಚ್ಚರಿಯ ವಿಚಾರವೆಂದರೆ, ಮತ್ತೊಂದು ಶಾಲೆಯ ಬಳಿ ಹಿಂದಿನ ತಿಂಗಳು 215 ಸಮಾಧಿಗಳು ಪತ್ತೆಯಾಗಿದ್ದವು.
ಮಾರಿವಾಲ್ ಇಂಡಿಯನ್ ರೆಸಿಡೆನ್ಶಿಯಲ್ ಸ್ಕೂಲ್ ಈಗ ಕೊವೆಸ್ಸಸ್ ಫಸ್ಟ್ ನೇಷನ್ ಪ್ರದೇಶವಿದ್ದ ಸ್ಥಳದಲ್ಲಿದ್ದು, ಸಾಸ್ಕಾಚೆವಾನ್ ರಾಜಧಾನಿಯಾದ ರೆಜಿನಾದಿಂದ ಸುಮಾರು 135 ಕಿಲೋಮೀಟರ್ ದೂರದಲ್ಲಿದೆ. ಸ್ಥಳದಲ್ಲಿ ಸುಮಾರು 600 ಮೃತದೇಹಗಳನ್ನು ಸಮಾಧಿ ಮಾಡಿರಬಹುದೆಂದು ಕೊವೆಸ್ಸಸ್ ಪ್ರದೇಶದ ಮುಖ್ಯಸ್ಥ ಕ್ಯಾಡ್ಮಸ್ ಡೆಲೋರ್ಮೆ ಮಾಹಿತಿ ನೀಡಿದ್ದು, ಮತ್ತಷ್ಟು ಮೃತದೇಹಗಳು ಸಿಗುವ ಸಾಧ್ಯತೆಯಿದೆ. ರೋಮನ್ ಕ್ಯಾಥೋಲಿಕ್ ಚರ್ಚ್ ನಡೆಸುತ್ತಿದ್ದ ಶಾಲೆಯ ಬಳಿಯೂ ಈ ಹಿಂದೆ ಮೃತದೇಹಗಳು ಪತ್ತೆಯಾಗಿದ್ದವು ಎಂದಿದ್ದಾರೆ.
ಸಾಂಸ್ಕೃತಿಕ ಹತ್ಯಾಕಾಂಡ
ಕೆನಡಾದಲ್ಲಿ ಕೆಲವು ವರದಿಗಳು ಹೇಳುವಂತೆ, ಮೂಲನಿವಾಸಿಗಳಿಂದ ಅವರ ಮಕ್ಕಳನ್ನು ಬಲವಂತವಾಗಿ ಪ್ರತ್ಯೇಕಿಸಿ, ವಸತಿ ಶಾಲೆಗಳಲ್ಲಿ ಸೇರಿಸಿಕೊಳ್ಳಲಾಗುತ್ತಿತ್ತು. 1831ರಿಂದ 1996ರವರೆಗೆ ಸುಮಾರು ಒಂದೂವರೆ ಲಕ್ಷ ಮಂದಿ ಮೂಲನಿವಾಸಿ ಮಕ್ಕಳನ್ನು ಶಾಲೆಗಳಿಗೆ ಸೇರಿಸಿಕೊಳ್ಳಲಾಯಿತು. ಇಂಥ ಮಕ್ಕಳ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು. ಈ ಕಾರಣಕ್ಕಾಗಿ ಸುಮಾರು 4 ಸಾವಿರ ಮಂದಿ ಮಕ್ಕಳು ಸಾವನ್ನಪ್ಪಿದ್ದರು ಎಂದು ಕೆನಡಾದ ಸತ್ಯ ಮತ್ತು ಸಾಮರಸ್ಯ ಆಯೋಗ ತನ್ನ ಸಾಂಸ್ಕೃತಿಕ ಹತ್ಯಾಕಾಂಡದ ವರದಿಯಲ್ಲಿ ಮಾಹಿತಿ ಬಹಿರಂಗಪಡಿಸಿದೆ.
ಇದನ್ನೂ ಓದಿ: ಕೆನಡಾದ ಮುಚ್ಚಿದ್ದ ವಸತಿ ಶಾಲೆಯಲ್ಲಿ 215 ಮಕ್ಕಳ ಮೃತದೇಹಗಳು ಪತ್ತೆ!
ಮಕ್ಕಳಿಗೆ ಆ ಶಾಲೆಗಳಲ್ಲಿ ತಮ್ಮ ಮೂಲನಿವಾಸಿ ಸಂಸ್ಕೃತಿ ಮತ್ತು ಭಾಷೆಯನ್ನು ಅನುಸರಿಸಲು ನಿರ್ಬಂಧವಿತ್ತು. ತಮ್ಮ ಮಕ್ಕಳು ಮನೆಗೆ ವಾಪಸ್ ಆಗಿಲ್ಲವೆಂದೂ ಸಾಕಷ್ಟು ದೂರುಗಳು ದಾಖಲಾಗಿದ್ದವು. ರೋಮನ್ ಕ್ಯಾಥೋಲಿಕ್ ಸಂಸ್ಕೃತಿಯನ್ನು ಅನುಸರಿಸುವಂತೆ ಅವರನ್ನು ಒತ್ತಾಯಿಸಲಾಗುತ್ತಿತ್ತು ಎನ್ನಲಾಗಿದೆ.
ಕ್ಷಮೆ ಕೇಳಿಲ್ಲ
ಕೊವೆಸ್ಸಸ್ ಫಸ್ಟ್ ನೇಷನ್ನಲ್ಲಿ ಮೂಲನಿವಾಸಿಗಳ ಶಾಲೆಯಿಂದ ಸ್ಥಳದಲ್ಲಿ ಸಮಾಧಿಗಳು ಪತ್ತೆಯಾಗಿರುವುದು ಭಯಂಕರ ಮತ್ತು ದುಃಖಕರವಾಗಿದೆ. ಮೂಲನಿವಾಸಿಗಳ ಮಕ್ಕಳ ಮೃತದೇಹವನ್ನು ಇಲ್ಲಿ ಸಮಾಧಿ ಮಾಡಲಾಗಿದೆ. ಈ ಅನ್ಯಾಯದ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಹೇಳಿದ್ದಾರೆ.
ಹತ್ಯಾಕಾಂಡಕ್ಕೆ ಒಳಗಾದ ಮಕ್ಕಳು ಇದ್ದುದು ರೋಮನ್ ಕ್ಯಾಥೋಲಿಕ್ ಚರ್ಚ್ಗೆ ಸೇರಿದ ಶಾಲೆಗಳಲ್ಲಿಆದರೂ, ಈ ಬಗ್ಗೆ ಕ್ಯಾಥೋಲಿಕ್ ಚರ್ಚ್ಗಳ ಮುಖ್ಯಸ್ಥರು ಈವರೆಗೆ ಸಂತಾಪ ಅಥವಾ ಕ್ಷಮೆ ಕೇಳಿಲ್ಲ ಎಂಬ ಆರೋಪವೂ ಇದೆ.