ವಾಷಿಂಗಟನ್: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕ್ವಾಡ್ ನಾಯಕರ ಮೊದಲ ವರ್ಚುವಲ್ ಶೃಂಗಸಭೆ ಫಲಪ್ರದವಾಗಿ ನಡೆಯಿತು ಮತ್ತು ಭಾಗವಹಿಸಿದ್ದ ಎಲ್ಲ ರಾಷ್ಟ್ರಗಳೂ ಇದರಿಂದ ಲಾಭ ಪಡೆಯಲಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. "ಕ್ವಾಡ್ ಭದ್ರತಾ ಸಂವಾದ" ಎಂದು ಕರೆಯಲ್ಪಡುವ ಈ ಕ್ವಾಡ್ ಗುಂಪು ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳನ್ನು ಒಳಗೊಂಡಿದೆ.
ಬೈಡನ್ ಶುಕ್ರವಾರ ನಡೆದ ಮೊದಲ ಕ್ವಾಡ್ ನಾಯಕರ ಶೃಂಗಸಭೆಯನ್ನು ಉದ್ಘಾಟಿಸಿದ್ದರು. ಸಭೆಯಲ್ಲಿ ಭಾರತದ ಪ್ರಧಾನಿ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹೈಡ್ ಸುಗಾ ಭಾಗವಹಿಸಿದ್ದರು.
ಕ್ವಾಡ್ ನಾಯಕರನ್ನುದ್ದೇಶಿಸಿ ಮಾತನಾಡಿದ ಬೈಡನ್, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರಕ್ಕಾಗಿ ಕ್ವಾಡ್ ಒಂದು ಪ್ರಮುಖ ವೇದಿಕೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಸಹಕಾರವನ್ನು ಹೆಚ್ಚಿಸಲು ಮತ್ತು ಪರಸ್ಪರ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸುವ ಹೊಸ ವೇದಿಕೆಯಾಗಿ ಕ್ವಾಡ್ ಕೆಲಸ ಮಾಡಲಿದೆ. ನಮ್ಮ ಬದ್ಧತೆಗಳನ್ನು ನಾವು ತಿಳಿದಿದ್ದೇವೆ, ನಮ್ಮ ಪ್ರದೇಶವು ಅಂತಾರಾಷ್ಟ್ರೀಯ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಎಲ್ಲ ಸಾರ್ವತ್ರಿಕ ಮೌಲ್ಯಗಳಿಗೆ ಬದ್ಧವಾಗಿದೆ ಮತ್ತು ನಮ್ಮ ಭವಿಷ್ಯದ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ ಎಂದು ಹೇಳಿದರು.
ಇಂಡೋ ಪೆಸಿಫಿಕ್ ವಲಯದಲ್ಲಿನ ಸಹಕಾರಕ್ಕೆ ಕ್ವಾಡ್ ಪ್ರಮುಖ ಪಾತ್ರ ವಹಿಸಲಿದೆ. ಮುಂಬರುವ ವರ್ಷಗಳಲ್ಲಿ ನಿಮ್ಮೆಲ್ಲರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಬೈಡನ್ ಕ್ವಾಡ್ ನಾಯಕರಿಗೆ ತಿಳಿಸಿದರು. ನಾಲ್ಕು ನಾಯಕರು ಎಲ್ಲಾ ದೇಶಗಳು ತಮ್ಮದೇ ಆದ ರಾಜಕೀಯ ಆಯ್ಕೆಗಳನ್ನು ಹೊಂದಲು ಒತ್ತಾಯಿಸಬೇಕು, ಬಲವಂತದಿಂದ ಮುಕ್ತವಾಗಿರಬೇಕು ಎಂದು ಪ್ರತಿಪಾದಿಸಿದರು.
ಜೀವ ಉಳಿಸುವ ಲಸಿಕೆಗಳ ಪೂರೈಕೆಯನ್ನು ಹೆಚ್ಚಿಸಲು WHO ಮತ್ತು ಕೋವಾಕ್ಸ್ ಫೆಸಿಲಿಟಿ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳೊಂದಿಗೆ ನಿಕಟ ಸಹಯೋಗದೊಂದಿಗೆ ಸಂಯೋಜಿಸುತ್ತೇವೆ ಎಂದು ಬೈಡನ್ ಬರೆದಿದ್ದಾರೆ.