ಮಾಸ್ಕೋ(ರಷ್ಯಾ): ಉಕ್ರೇನ್ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪೂರ್ವ ಉಕ್ರೇನ್ನ ಎರಡು ಪ್ರದೇಶಗಳನ್ನು 'ಸ್ವತಂತ್ರ'ವೆಂದು ಘೋಷಿಸಿ, ಅಲ್ಲಿ ತನ್ನ ಸೈನ್ಯವನ್ನು ನಿಯೋಜಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ್ದಾರೆ. ಇದು ರಷ್ಯಾ- ಉಕ್ರೇನ್ ಮಧ್ಯೆ ಯುದ್ಧದ ಕಾರ್ಮೋಡವನ್ನು ಮತ್ತಷ್ಟು ಹೆಚ್ಚಿಸಿದೆ.
ಉಕ್ರೇನ್ ಪ್ರತ್ಯೇಕತಾವಾದಿಗಳಿಗೆ ರಷ್ಯಾ ಬೆಂಬಲದ ಬಳಿಕ ಇದೀಗ ಆ ಪ್ರದೇಶಗಳಲ್ಲಿ ಶಾಂತಿಪಾಲನಾ ಕಾರ್ಯಾಚರಣೆ ಹೆಸರಿನಲ್ಲಿ ರಷ್ಯಾ ಸೇನೆ ಪೂರ್ವ ಉಕ್ರೇನ್ನತ್ತ ಸಾಗುತ್ತಿದೆ. ಇದು ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಪ್ರಾರಂಭಿಕ ನಡೆ ಎಂದು ಹೇಳಲಾಗುತ್ತಿದೆ.
ಪೂರ್ವ ಉಕ್ರೇನ್ನ ಪ್ರತ್ಯೇಕತಾವಾದಿಗಳ ಪ್ರದೇಶಗಳ ಮೇಲೆ ರಷ್ಯಾ ಎಷ್ಟು ಪ್ರಮಾಣದ ಸೈನ್ಯವನ್ನು ಕಳುಹಿಸುತ್ತಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಉಕ್ರೇನ್ನಿಂದ ಬೇರ್ಪಟ್ಟ ಈ ಪ್ರದೇಶಗಳಲ್ಲಿ ಶಾಂತಿಪಾಲನೆಗಾಗಿ ತನ್ನ ಸೇನೆಯನ್ನು ನೆಲೆಗೊಳಿಸಲಾಗುತ್ತಿದೆ ಎಂದು ರಷ್ಯಾ ಹೇಳಿಕೊಂಡಿದೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ವ್ಲಾಡಿಮಿರ್ ಪುಟಿನ್, ಪೂರ್ವ ಉಕ್ರೇನ್ ಈ ಹಿಂದಿನಿಂದಲೂ ರಷ್ಯಾದ ಭಾಗವಾಗಿದೆ. ಇದು ದೇಶದ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗಿದೆ. ಇಲ್ಲಿ ತನ್ನ ಸೇನೆಯನ್ನು ನಿಯೋಜಿಸುತ್ತಿರುವುದಕ್ಕೆ ರಷ್ಯಾದ ಜನರು ಸರ್ಕಾರವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಪೂರ್ವ ಉಕ್ರೇನ್ ಪ್ರದೇಶಗಳ ಮೇಲೆ ರಷ್ಯಾ ಸೇನೆಯನ್ನು ನೆಲೆಗೊಳಿಸುವ ಬಗ್ಗೆ ಪುಟಿನ್ ಅವರು, ಜರ್ಮನಿ ಮತ್ತು ಫ್ರಾನ್ಸ್ ಅಧ್ಯಕ್ಷರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಈ ಬಗ್ಗೆ ಇಬ್ಬರೂ ಅಧ್ಯಕ್ಷರು ನಿರಾಶೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು: ಭದ್ರತಾ ಮಂಡಳಿಯ ತುರ್ತು ಸಭೆ ಕರೆದ ವಿಶ್ವಸಂಸ್ಥೆ